ಮುಂಬೈ: 65 ವರ್ಷದ ಮಹಿಳೆಯೊಬ್ಬರು ತನ್ನ ಕುಟುಂಬದೊಂದಿಗೆ ಮತ್ತೆ ಒಂದಾಗಲು ಮುಂಬೈ ಪೊಲೀಸರು ಸಹಾಯ ಮಾಡಿರುವ ಮಾನವೀಯ ಘಟನೆ ನಡೆದಿದೆ.
ಈ ಮಹಿಳೆ ಮುಂಬೈನ ಬಾಂದ್ರಾ ಟರ್ಮಿನಸ್‌ನಲ್ಲಿ ಕಳೆದುಹೋಗಿದ್ದರು. ನಂತರ ಮಹಿಳೆ ಪೊಲೀಸರ ಸಹಾಯವನ್ನು ಕೋರಿದ್ದರು. ಈಗ ಬಹು ಸಾಹಸ ಪಟ್ಟು ಮಹಿಳೆಯ ಕುಟುಂಬದವರನ್ನು ಒಟ್ಟುಗೂಡಿಸುವಲ್ಲಿ ಪೊಲೀಸರು ನೆರವಾಗಿದ್ದಾರೆ.
ಇದರ ವಿಡಿಯೋವನ್ನು ಪೊಲಿಸ್ ಇಲಾಖೆ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ವಯಸ್ಸಾದ ಮಹಿಳೆಯನ್ನು ಪೊಲೀಸ್ ಇಲಾಖೆ ಕುರ್ಚಿ ಮೇಲೆ ಕೂರಿಸಿದ್ದು, ಅಲ್ಲಿ ಕುಟುಂಬವನ್ನು ಸಂಪರ್ಕಿಸಲು ಪ್ರಯತ್ನಿಸುವುದನ್ನು ನೋಡಬಹುದು.
ಆ ಸಂದರ್ಭದಲ್ಲಿ ಇನ್ನೊಬ್ಬ ಅಧಿಕಾರಿ ಮಹಿಳೆಯ ಬಳಿ ಬಂದು ತಿನ್ನಲು ಏನಾದರೂ ಬೇಕೇ ಕೇಳಿದಾಗ ಮಹಿಳೆ ನಿರಾಕರಿಸುತ್ತಾಳೆ ಮತ್ತು ಸಹಾಯ ಕೇಳಿದ್ದಕ್ಕೆ ಕೈಮುಗಿದು ಅಧಿಕಾರಿಯ ಪಾದಗಳನ್ನು ಮುಟ್ಟಲು ಪ್ರಯತ್ನಿಸುವುದನ್ನು ನೋಡಬಹುದು.
ಕೂಡಲೇ ಅಧಿಕಾರಿಯು ಮಹಿಳೆಯನ್ನು ಸಮಾಧಾನಪಡಿಸಿ ಆಕೆಯ ಕುಟುಂಬದವರ ಮಾಹಿತಿ ಪಡೆದಿದ್ದಾರೆ. ಕೊನೆಗೆ ಮಹಿಳೆ ಉತ್ತರ ಪ್ರದೇಶದವಳು ಎಂದು ತಿಳಿದು, ಅಲ್ಲಿಯ ಪೊಲೀಸರನ್ನು ಸಂಪರ್ಕಿಸಿ ಮಹಿಳೆಯನ್ನು ಮನೆಗೆ ತಲುಪಿಸುವ ಕೆಲಸ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರಿಂದ ಅಭಿನಂದನೆಗಳ ಸುರಿಮಳೆಯಾಗುತ್ತಿದ್ದು, ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.