ಬೆಂಗಳೂರು: ಕೆಎಸ್ಆರ್ಟಿಸಿ ಸಿಬ್ಬಂದಿ ಹೃದ್ರೋಗ ಸಂಬಂಧಿತ ಕಾಯಿಲೆ ತಪಾಸಣೆ ಚಿಕಿತ್ಸೆಗಾಗಿ ಜಯದೇವ ಸಂಸ್ಥೆಯೊಂದಿಗೆ ಸಾರಿಗೆ ನಿಗಮದಿಂದ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಸಾರಿಗೆ ನಿಗಮದ ಸಿಬ್ಬಂದಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಉದ್ದೇಶದಿಂದ 10 ಮಾದರಿ ಹೃದಯ ಸಂಬಂಧಿ ವೈದ್ಯಕೀಯ ತಪಾಸಣೆಗಳನ್ನು ಮಾಡಿಸಲು 5 ವರ್ಷಗಳ ಅವಧಿಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯೊಂದಿಗೆ ಸಾರಿಗೆ ನಿಗಮ ಒಪ್ಪಂದ ಮಾಡಿಕೊಂಡಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್, ಜಯದೇವ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರು ಒಡಂಬಡಿಕೆಗೆ ಸಹಿ ಹಾಕಿದ್ದಾರೆ. ಈ ಸಂದರ್ಭದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಕೆಎಸ್ಆರ್ಟಿಸಿ ಸಿಬ್ಬಂದಿ ಹೃದಯ ತಪಾಸಣೆ ಮಾಡಿಸುವುದರಿಂದ ಸಂಭವನೀಯ ಹೃದಯಘಾತ ತಪ್ಪಿಸಲು, ಮುನ್ನೆಚ್ಚರಿಕೆ ವಹಿಸಲು ಅನುಕೂಲವಾಗುತ್ತದೆ. ಜೀವಗಳ ರಕ್ಷಣೆ ಆಗುತ್ತದೆ. ಕಡಿಮೆ ದರದಲ್ಲಿ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಈ ಯೋಜನೆ ಜಾರಿಗೊಳಿಸಲಾಗಿದೆ ಎಂದು ಹೇಳಿದ್ದಾರೆ.