ನವದೆಹಲಿ: ಯುವಜನರ ದಿಢೀರ್ ಸಾವಿನ ಬಗ್ಗೆ ತಜ್ಞರು ಶೋಧ ನಡೆಸಿದ್ದು, ದೇಶದಲ್ಲಿ ಹೆಚ್ಚುತ್ತಿರುವ ಹೃದಯಘಾತ ಸಂಬಂಧಿತ ಸಾವುಗಳಿಗೆ ದೀರ್ಘಾವಧಿಯ ಕೋವಿಡ್ ಸೋಂಕು ಕಾರಣವಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಯುವಜನರ ದಿಢೀರ್ ಸಾವಿನ ಬಗ್ಗೆ ಶೋಧ ನಡೆಸಲಾಗಿದೆ. ಕೆಲವು ದಿಢೀರ್ ಸಾವುಗಳನ್ನು ಉಲ್ಲೇಖಿಸಿ ಪ್ರಖ್ಯಾತ ಹೃದ್ರೋಗ ತಜ್ಞರು ವರದಿ ಮಾಡಿದ್ದು, ಚಿಕ್ಕ ವಯಸ್ಸಿನ ಮಕ್ಕಳಿಂದ ಹಿಡಿದು ಹರೆಯದ ಯುವ ಜನತೆ ಹೃದಯಾಘಾತಕ್ಕೆ ಒಳಗಾಗುತ್ತಿರುವುದರ ಹಿಂದೆ ಕೊರೋನಾ ಸೋಂಕಿನ ಸಂಪರ್ಕ ಕಾಣಿಸಿದೆ ಎಂದು ಹೇಳಿದ್ದಾರೆ.
ಹೃದಯಘಾತಕ್ಕೆ ಇಂತಹುದೇ ಕಾರಣವೆಂದು ಖಚಿತವಾಗಿ ಹೇಳಲು ಆಗುವುದಿಲ್ಲ. ಆದರೆ, ಕರೋನಾ ಜನರನ್ನು ಬಹುವಾಗಿ ಕಾಡಿದ ನಂತರ ಹೃದಯ ಸಂಬಂಧಿ ಸಾವುಗಳಿಗೆ ಸೋಂಕಿನ ಗುಪ್ತ ಕಣಗಳೇ ಕಾರಣವಾಗಿರಬಹುದು ಎಂದು ಏಮ್ಸ್ ವೈದ್ಯ ಡಾ. ರಾಕೇಶ್ ಯಾದವ್ ಹೇಳಿದ್ದಾರೆ.
ಕೊರೋನಾದಿಂದ ಚೇತರಿಕೆ ಕಂಡ, ದುರ್ಬಲಗೊಂಡ ಹೃದಯ ಸ್ನಾಯು, ಹೃದಯ ಬಡಿತದಲ್ಲಿ ಪದೇಪದೇ ಏರುಪೇರು ಕಾಣಿಸಿಕೊಂಡ ವ್ಯಕ್ತಿಗಳಲ್ಲಿ ಹೃದಯಘಾತ ಉಂಟಾಗುವ ಸಂಭವ ಹೆಚ್ಚಾಗಿರುತ್ತದೆ. ಕೆಲವರಿಗೆ ಹೃದಯಘಾತ ಕಾಯಿಲೆ ವಂಶವಾಹಿಯಾಗಿ ಬಂದಿರಬಹುದು. ಅಧಿಕ ರಕ್ತದೊತ್ತಡ, ಮಧುಮೇಹ, ಸ್ಥೂಲಕಾಯ, ಧೂಮಪಾನಿಗಳಲ್ಲಿ ಹೃದಯಘಾತವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇಂಥವರು ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡರೂ ಒಳಗೆ ಹೃದಯ ದುರ್ಬಲ ಗೊಂಡಿರುತ್ತದೆ ಎಂದು ಹೇಳಲಾಗಿದೆ.
ಕೆಲವು ತಿಂಗಳಿಂದ ದೇಶದಲ್ಲಿ ಹೃದಯ ಸ್ತಂಭದಿಂದ ಸಾವುಗಳು ಹೆಚ್ಚುತ್ತಿರುವುದು ಕಂಡುಬಂದಿದೆ. ಚಿಕ್ಕ ವಯಸ್ಸಿನವರು ಹಾಗೂ ಮಧ್ಯ ವಯಸ್ಕರು ಹೆಚ್ಚಾಗಿ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ.