
ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚುತ್ತಿದೆ. ನಾಲ್ಕನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಇಲ್ಲಿನ ಮಂಚಿಯಾಲ ಜಿಲ್ಲೆಯ ಜನ್ನಾರಂ ಮಂಡಲದ ರೊಟಿಗೂಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. 10 ವರ್ಷದ ಸಮನ್ವಿತಾ ಮೃತ ವಿದ್ಯಾರ್ಥಿನಿ. ಎಂದಿನಂತೆ ಶಾಲೆಗೆ ಹೋಗಲು ರೆಡಿಯಾಗುತ್ತಿದ್ದ ಸಮನ್ವಿತಾ, ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾಳೆ. ತಕ್ಷಣ ಆಕೆಯನ್ನು ತಂದೆ ನಗರಾಜು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಬಾಲಕಿ ಚಿಕಿತ್ಸೆ ಫಲಿಸದೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ.
ಕಳೆದ ವಾರವಷ್ಟೇ ಜಿಲ್ಲೆಯ ಚೆನ್ನೂರು ಪಟ್ಟಣದ ಪದ್ಮನಗರ್ ಕಾಲೋನಿಯಲ್ಲಿ 12 ವರ್ಷದ ಬಾಲಕಿಯೊಬ್ಬಳು ಹೃದಯಾಘಾತದಿಂದ ಸಾವನ್ನಪ್ಪಿದ್ದಳು. ಈ ಘಟನೆ ಮಾಸುವ ಮುನ್ನವೇ ಇದೀಗ ಮತ್ತೋರ್ವ ಬಾಲಕಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ.