ಶ್ವಾನಗಳ ಆತ್ಮಹತ್ಯೆ ಸೇತುವೆಯ ಬಗ್ಗೆ ಎಂದಾದ್ರೂ ಕೇಳಿದ್ದೀರಾ ? ಸಾಕುಪ್ರಾಣಿಗಳು ಕೊನೆಯುಸಿರೆಳೆಯುವ ವಿಚಿತ್ರ ಸ್ಥಳ ಸ್ಕಾಟ್ಲೆಂಡ್‌ನ ಡುಂಬಾರ್ಟನ್‌ನಲ್ಲಿದೆ.
ಡುಂಬಾರ್ಟನ್‌ನ ಸೇತುವೆ ಬಳಿ ಬರುವ ಶ್ವಾನಗಳು ಏಕಾಏಕಿ ಇಲ್ಲಿಂದ ಜಿಗಿಯುತ್ತವೆಯಂತೆ. ಹೀಗಾಗಿ ಇದಕ್ಕೆ ನಾಯಿಗಳ ಆತ್ಮಹತ್ಯೆಯ ಸೇತುವೆ ಎಂದೇ ಕರೆಯಲಾಗುತ್ತದೆ. ಆದರೆ, ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಯಿಲ್ಲ. ನಾಯಿಗಳು ಇಲ್ಲಿ ಏಕೆ ಸಾಯುತ್ತವೆ ಎಂಬ ಬಗ್ಗೆ ಇದುವರೆಗೆ ತಜ್ಞರು ಹಾಗೂ ವಿಜ್ಞಾನಿಗಳಿಗೂ ಕಂಡುಹಿಡಿಯಲಾಗಿಲ್ಲ.
ಸ್ಥಳೀಯರ ಪ್ರಕಾರ, ಓವರ್ ಟೌನ್ ಸೇತುವೆಯಲ್ಲಿ ಈ ವಿಚಿತ್ರ ಘಟನೆಗಳು ಕಳೆದ ಕೆಲವು ದಶಕಗಳಿಂದ ಘಟಿಸುತ್ತಿವೆ. ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ನಾಯಿಗಳು ಸೇತುವೆಯಿಂದ ಬೀಳುವ ಅಥವಾ ಜಿಗಿದ ಹಲವಾರು ಪ್ರಕರಣಗಳಿವೆ. ಸೇತುವೆ ಕೆಳಗೆ 50 ಅಡಿಗಳಷ್ಟು ಮಾತ್ರ ಆಳವಿದ್ದು, ಕೇವಲ ಬಂಡೆಗಳಷ್ಟೇ ಇದೆ.
1950 ರ ದಶಕದಿಂದ ಸುಮಾರು 300 ನಾಯಿಗಳು ಸೇತುವೆಯಿಂದ ಜಿಗಿದಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಟ್ಯಾಬ್ಲಾಯ್ಡ್‌ಗಳ ವರದಿಯಲ್ಲಿ 600 ನಾಯಿಗಳು ಜಿಗಿದಿದ್ದರೆ, 50 ಸಾವು ಕಂಡಿವೆ ಎಂದು ವರದಿಯಾಗಿದೆ. ನಾಯಿಗಳು ಸಾಯುವ ಮುಂಚೆ ನೆಗೆಯುವಂತೆ ಮಾಡುವಂಥದ್ದು ಏನೋ ಘಟಿಸುತ್ತದೆ ಅನ್ನೋದು ಸ್ಥಳೀಯರ ನಂಬಿಕೆಯಾಗಿದೆ.
2014ರಲ್ಲಿ ಕೆನ್ನೆತ್ ಮೈಕಲ್ ಎಂಬುವವರು ತಮ್ಮ ಗೋಲ್ಡನ್ ರಿಟ್ರೈವರ್ ಜಾತಿಯ ನಾಯಿಯೊಂದಿಗೆ ಸೇತುವೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ, ನಾಯಿ ಇದ್ದಕ್ಕಿದ್ದಂತೆ ಸೇತುವೆಯಿಂದ ಜಿಗಿದಿದೆಯಂತೆ. ಅದೃಷ್ಟವಶಾತ್ ಅದು ಬದುಕುಳಿಯಿತು ಎಂದು ಹೇಳಿದ್ದಾರೆ.