ಬಿಸಿ ಬಿಸಿ ಸೂಪ್‌ಗಳು ಚಳಿಗಾಲ, ಮಳೆಗಾಲದಲ್ಲಂತೂ ದೇಹಕ್ಕೆ ಹಿತಕರವಾಗಿರುತ್ತವೆ. ನಾವು ಬೇಡವೆಂದು ಬಿಸಾಡುವ ಮೂಲಂಗಿ ಸೊಪ್ಪಿನಿಂದಲೂ ರುಚಿಕರವಾದ ಸೂಪ್ ಮಾಡಬಹುದು. ಇದು ಆರೋಗ್ಯಕ್ಕೂ ಒಳ್ಳೆಯದು.
ಬೇಕಾಗುವ ಸಾಮಗ್ರಿ: 1 ಚಮಚ ಎಣ್ಣೆ, 1 ಚಮಚ ಜೀರಿಗೆ, 5 ಎಸಳು ಬೆಳ್ಳುಳ್ಳಿ, 1 ಈರುಳ್ಳಿ, 2 ಟೊಮೆಟೋ, ಒಂದು ಕಟ್ಟು ಮೂಲಂಗಿ ಸೊಪ್ಪು, ಉಪ್ಪು, ಕಾಳುಮೆಣಸಿನ ಪುಡಿ.
ಮಾಡುವ ವಿಧಾನ: ಮೊದಲು ಒಂದು ಬಾಣೆಲೆಗೆ ಎಣ್ಣೆ ಹಾಕಿ ಬಿಸಿಮಾಡಿ, ಅದಕ್ಕೆ ಜೀರಿಗೆ ಹಾಕಿಕೊಳ್ಳಿ. ಜೀರಿಗೆ ಚಟಪಟ ಅಂದ ಬಳಿಕ ಬೆಳ್ಳುಳ್ಳಿ ಹಾಕಿ ಸ್ವಲ್ಪ ಹುರಿಯಿರಿ. ನಂತರ ಈರುಳ್ಳಿ ಹಾಕಿ. ಈರುಳ್ಳಿ ತಿಳಿ ಗುಲಾಬಿ ಬಣ್ಣಕ್ಕೆ ತಿರುಗಿದ ಬಳಿಕ ಟೊಮೆಟೋ ಹಾಕಿ ಹುರಿಯಿರಿ. ಟೊಮೆಟೋ ಬೆಂದ ಮೇಲೆ ಹೆಚ್ಚಿಟ್ಟುಕೊಂಡ ಮೂಲಂಗಿ ಸೊಪ್ಪು ಹಾಕಿ ಸ್ವಲ್ಪ ನೀರು ಬೆರೆಸಿ 5 ನಿಮಿಷ ಬೇಯಿಸಿಕೊಳ್ಳಿ.
ನಂತರ ಬಾಣಲೆಯನ್ನು ಕೆಳಕ್ಕಿಳಿಸಿ 10 ನಿಮಿಷ ತಣ್ಣಗಾಗಲು ಬಿಡಿ. ಅದು ತಣ್ಣಗಾಗುತ್ತಿದ್ದಂತೆ ಮಿಕ್ಸಿಗೆ ಹಾಕಿ ಗ್ರೈಂಡ್ ಮಾಡಿಕೊಳ್ಳಿ. ನಂತರ ಮತ್ತದೇ ಬಾಣಲೆಗೆ ಹಾಕಿ ನಿಮಗೆ ಬೇಕಾದಷ್ಟು ನೀರು, ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಬೆರೆಸಿ ಕುದಿಸಿ. ನಂತರ ಬಿಸಿ ಬಿಸಿ ಸೂಪ್ ಅನ್ನು ಸೋಸಿಕೊಂಡು ಕುಡಿಯಿರಿ.