ನಮ್ಮ ಆರೋಗ್ಯಕ್ಕೆ ವ್ಯಾಯಾಮ ಬಹಳ ಮುಖ್ಯ. ಬೆಳಿಗ್ಗೆ ಅಥವಾ ಸಂಜೆ ಒಂದು ಗಂಟೆ ಇಲ್ಲವೆ ಒಂದು ಅರ್ಧ ಗಂಟೆ ವ್ಯಾಯಾಮ ಮಾಡುವಂತೆ ಸಲಹೆ ನೀಡಲಾಗುತ್ತದೆ. ವ್ಯಾಯಾಮದಿಂದ ದೇಹ ಫಿಟ್ ಆಗಿರುವ ಜೊತೆಗೆ ಮಾನಸಿಕ ಶಾಂತಿ ಸಿಗುತ್ತದೆ. ಆದ್ರೆ ಒತ್ತಡದ ಜೀವನದಿಂದಾಗಿ ಜನರಿಗೆ ಒಂದೇ ಬಾರಿ ಅರ್ಧ ಗಂಟೆ ಅಥವಾ ಒಂದು ಗಂಟೆ ವ್ಯಾಯಾಮ ಮಾಡಲು ಸಾಧ್ಯವಿಲ್ಲ. ಇಷ್ಟೊಂದು ಸಮಯ ಸಿಗೋದಿಲ್ಲ. ಸಮಯದ ಅಭಾವ ನಿಮಗೂ ಇದ್ದಲ್ಲಿ ಇನ್ಮುಂದೆ ನೀವು ವ್ಯಾಯಾಮ ಬಿಡಬೇಕಾಗಿಲ್ಲ. ವ್ಯಾಯಾಮದ ಹೊಸ ವಿಧಾನವನ್ನು ಅಳವಡಿಸಿಕೊಳ್ಳಿ.
ಇತ್ತೀಚಿನ ದಿನಗಳಲ್ಲಿ ಜನರು ಎಕ್ಸರ್ಸೈಸ್ ಸ್ನ್ಯಾಕಿಂಗ್ ಪದ್ಧತಿ ರೂಢಿಸಿಕೊಳ್ತಿದ್ದಾರೆ. ಇದನ್ನು ನೀವು ಮಿನಿ ತಾಲೀಮು ಎಂದೂ ಕರೆಯಬಹುದು. ದಿನದಲ್ಲಿ ಹಲವಾರು ಬಾರಿ ಈ ವ್ಯಾಯಾಮ ಮಾಡಬಹುದು. ನೀವು ಕೆಲವೇ ಕೆಲವು ನಿಮಿಷ ವ್ಯಾಯಾಮ ಮಾಡಿ ಬಿಡಬೇಕು. ಮತ್ತೆ ಸಮಯ ಸಿಕ್ಕಾಗ ಮತ್ತೆ ಮಾಡಬೇಕು. 5-10 ನಿಮಿಷಗಳ ಕಾಲ ವ್ಯಾಯಾಮ ಮಾಡಿದ್ರೆ ಸಾಕು. ಈ ವ್ಯಾಯಾಮದಿಂದ ನಿಮ್ಮ ಆರೋಗ್ಯವನ್ನು ನೀವು ಕಾಪಾಡಿಕೊಳ್ಳಬಹುದು. ಇದಕ್ಕೆ ಜಾಗದ ಅಗತ್ಯವಿಲ್ಲ. ಮನೆಯಲ್ಲಿ, ಕಚೇರಿಯಲ್ಲಿ ಅಥವಾ ನೀವು ಕೆಲಸ ಮಾಡ್ತಿರುವ ಜಾಗದಲ್ಲೇ ಮಾಡಬಹುದು. ಈ ವ್ಯಾಯಾಮ ಮಾಡಿದ ನಂತ್ರ ಬೆವರು ಬರಬೇಕು ಎಂದೇನಿಲ್ಲ.
ಈ ವ್ಯಾಯಾಮ ಹೃದಯ ಮತ್ತು ಹೊಟ್ಟೆಯ ಆರೋಗ್ಯ ಕಾಪಾಡುತ್ತದೆ. ಕೆಲವೊಮ್ಮೆ 30 ನಿಮಿಷಗಳ ತಾಲೀಮುಗಿಂತ 10 ನಿಮಿಷಗಳ ವ್ಯಾಯಾಮದ ಫಲಿತಾಂಶ ಉತ್ತಮವಾಗಿರುತ್ತದೆ. ಮೆಟ್ಟಿಲು ಹತ್ತುವುದು, ಕೆಲಸದ ಸ್ಥಳದಲ್ಲೇ ಫಾಸ್ಟ್ ವಾಕಿಂಗ್ ಅಥವಾ ಸಣ್ಣಪುಟ್ಟ ವ್ಯಾಯಾಮ ಇದರಲ್ಲಿ ಸೇರಿದೆ. ಇದನ್ನು ಮಾಡುವ ಮುನ್ನ ವೈದ್ಯರ ಸಲಹೆ ಪಡೆಯುವುದು ಸೂಕ್ತ.