ಬೆಂಗಳೂರು: ರಾಜ್ಯದ ಜನರಿಗೆ ಆರೋಗ್ಯ -ಕ್ಷೇಮ ಕಲ್ಪಿಸುವ ಉದ್ದೇಶದಿಂದ 2859 ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲಾಗುವುದು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 478.91 ಕೋಟಿ ರೂಪಾಯಿ ವೆಚ್ಚದಲ್ಲಿ 2859 ಆರೋಗ್ಯ ಉಪ ಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲು ಅನುಮೋದನೆ ನೀಡಲಾಗಿದೆ.
ಆರೋಗ್ಯ ಉಪ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ರಾಷ್ಟ್ರೀಯ ಆರೋಗ್ಯ ಮಿಷನ್ ವ್ಯಾಪ್ತಿಗೆ ತರಲಾಗುವುದು. ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲಾಗುವುದು. ಇತರೆ ಆರೋಗ್ಯಸೇವೆಗಳೊಂದಿಗೆ ಗರ್ಭಿಣಿಯರು, ಹೆಣ್ಣುಮಕ್ಕಳಿಗೆ ಇನ್ನಷ್ಟು ನೆರವು ನೀಡುವುದು ಯೋಜನೆಯ ಉದ್ದೇಶವಾಗಿದೆ.
ಆರೋಗ್ಯ ಇಲಾಖೆಯಿಂದ ವಿದ್ಯಾರ್ಥಿನಿಯರಿಗೆ ಶುಚಿ ಕಾರ್ಯಕ್ರಮದಡಿ ತಲಾ 10 ಸ್ಯಾನಿಟರಿ ಪ್ಯಾಡ್ ವಿತರಿಸಲಾಗುವುದು. ಸರ್ಕಾರಿ ಮತ್ತು ಅನುದಾನಿತ ಶಾಲಾ, ಕಾಲೇಜುಗಳ ಹೆಣ್ಣುಮಕ್ಕಳಿಗೆ ಆರೋಗ್ಯ ಇಲಾಖೆಯ ಮೂಲಕ ಸ್ಯಾನಿಟರಿ ಪ್ಯಾಡ್ ನೀಡಲಾಗುತ್ತದೆ.