ಭಾರತದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳಲ್ಲಿ ಇಳಿಕೆ ಕಂಡು ಬಂದಿದೆ. ಮೇ ತಿಂಗಳಿನಲ್ಲಿ ಕೊರೊನಾ ಸೋಂಕಿನ ಪ್ರಕರಣ ನಿರಂತರವಾಗಿ ಏರಿಕೆ ಕಂಡು ಬಂದಿತ್ತು. ಆಗ ಕೇಂದ್ರ ಆರೋಗ್ಯ ಸಚಿವಾಲಯ ಚಿಕಿತ್ಸೆಗೆ ಸಂಬಂಧಿಸಿದಂತೆ ಕೆಲವೊಂದು ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಕೇಂದ್ರ ಆರೋಗ್ಯ ಸಚಿವಾಲಯ ಸೌಮ್ಯ ಲಕ್ಷಣವಿರುವ ಕೊರೊನಾ ರೋಗಿಗಳಿಗಾಗಿ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಪರಿಷ್ಕೃತ ಮಾರ್ಗಸೂಚಿ ಪ್ರಕಾರ, ಆಂಟಿಪೈರೆಟಿಕ್ ಮತ್ತು ಆಂಟಿಟಸ್ಸಿವ್ ಹೊರತುಪಡಿಸಿ ಎಲ್ಲಾ ಇತರ ಔಷಧಿಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಸೌಮ್ಯ ಲಕ್ಷಣಗಳಿರುವ ರೋಗಿಗಳ ಚಿಕಿತ್ಸೆಗಾಗಿ ವೈದ್ಯರು ನೀಡುವ ಹೈಡ್ರಾಕ್ಸಿಕ್ಲೋರೋಕ್ವಿನ್, ಐವರ್ಮೆಕ್ಟಿನ್, ಡಾಕ್ಸಿಸೈಕ್ಲಿನ್, ಸತು, ಮಲ್ಟಿವಿಟಾಮಿನ್ ಮತ್ತು ಇತರ ಔಷಧಿಗಳನ್ನು ನಿಲ್ಲಿಸಲಾಗಿದೆ. ಜ್ವರಕ್ಕೆ ಆಂಟಿಪೈರೆಟಿಕ್ ಮತ್ತು ಶೀತ ರೋಗಲಕ್ಷಣಗಳಿಗೆ ಆಂಟಿಟಸ್ಸಿವ್ ಮಾತ್ರ ನೀಡಲಾಗುವುದು. ರೋಗಿಗಳಿಗೆ ಅನಿವಾರ್ಯವಲ್ಲದ ಪರೀಕ್ಷೆಗಳನ್ನು ನಿಲ್ಲಿಸುವಂತೆ ವೈದ್ಯರಿಗೆ ಸೂಚನೆ ನೀಡಲಾಗಿದೆ. ಇವುಗಳಲ್ಲಿ ಸಿಟಿ ಸ್ಕ್ಯಾನ್ ಕೂಡ ಸೇರಿದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೈ ತೊಳೆಯುವುದು, ಮಾಸ್ಕ್ ಬಳಕೆಯನ್ನು ಮುಂದುವರೆಸುವಂತೆ ಸೂಚಿಸಲಾಗಿದೆ. ಸೌಮ್ಯ ಲಕ್ಷಣವಿರುವ ಕೊರೊನಾ ರೋಗಿಗಳು ಫೋನ್ ಮೂಲಕ ವೈದ್ಯರಿಂದ ಮಾಹಿತಿ ಪಡೆದು ಪೌಷ್ಠಿಕ ಆಹಾರ ಸೇವನೆ ಮಾಡುವಂತೆ ಸೂಚನೆ ನೀಡಲಾಗಿದೆ. ಕೊರೊನಾ ರೋಗಿಗಳು ಮತ್ತು ಅವರ ಕುಟುಂಬಗಳು ಮಾತನಾಡಲು ಫೋನ್ ಅಥವಾ ವಿಡಿಯೋ ಕರೆ ಅನುಕೂಲ ಮಾಡಿಕೊಡಬೇಕೆಂದು ಸೂಚಿಸಲಾಗಿದೆ.
ರೋಗಲಕ್ಷಣವಿಲ್ಲದ ರೋಗಿಗಳಿಗೆ ಯಾವುದೇ ಔಷಧಿಯನ್ನು ಶಿಫಾರಸು ಮಾಡಲಾಗಿಲ್ಲ. ಬೇರೆ ಯಾವುದೇ ಕಾಯಿಲೆಯಿಲ್ಲದ, ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ಜ್ವರ, ಉಸಿರಾಟದ ತೊಂದರೆ ಮತ್ತು ಆಮ್ಲಜನಕದ ಮಟ್ಟವನ್ನು ಸ್ವಯಂ-ಮೇಲ್ವಿಚಾರಣೆ ಮಾಡಲು ಕೇಳಲಾಗಿದೆ.
ಕೊರೊನಾ ವೈರಸ್ ಸೋಂಕಿನ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳು ಆಂಟಿಪೈರೆಟಿಕ್ ಮತ್ತು ಆಂಟಿಟಸ್ಸಿವ್ ಔಷಧಿಗಳನ್ನು ತೆಗೆದುಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಕೆಮ್ಮುಗಾಗಿ ಐದು ದಿನಗಳವರೆಗೆ ದಿನಕ್ಕೆ ಎರಡು ಬಾರಿಯಂತೆ 800 ಎಂಸಿಜಿ ಬುಡೆಸೊನೈಡ್ ತೆಗೆದುಕೊಳ್ಳಲು ಸೂಚಿಸಲಾಗಿದೆ.