ಕೋವಿಡ್‌ನ ಒಮಿಕ್ರಾನ್ ರೂಪಾಂತರಿಯಿಂದ ದೇಶದಲ್ಲಿ ಮೊದಲ ಸಾವಿನ ಘಟನೆ ರಾಜಸ್ಥಾನದ ಉದಯ್ಪುರದಲ್ಲಿ ಸಂಭವಿಸಿದೆ.
ಕಳೆದ ವಾರ ಮೃತಪಟ್ಟ ಈ ವ್ಯಕ್ತಿಯ ದೇಹದಲ್ಲಿ ಒಮಿಕ್ರಾನ್‌ನ ಸ್ಟ್ರೇನ್ ಇದ್ದಿದ್ದು ಕಂಡು ಬಂದಿದೆ. ಈ ಸಾವು ’ತಾಂತ್ರಿಕವಾಗಿ’ ಒಮಿಕ್ರಾನ್‌ಗೆ ಸಂಬಂಧಿಸಿದ್ದು ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಪತ್ರಿಕಾಗೋಷ್ಠಿಯಲ್ಲಿ ಇಂದು ತಿಳಿಸಿದ್ದಾರೆ.
“ಆ ವ್ಯಕ್ತಿ ಒಮಿಕ್ರಾನ್ ಪಾಸಿಟಿವ್ ಎಂದು ಪರೀಕ್ಷಾ ವರದಿ ಬರುವ ವೇಳೆಗಾಗಲೇ ಮೃತಪಟ್ಟಾಗಿತ್ತು. ಆತ ಹಿರಿಯ ವ್ಯಕ್ತಿಯಾಗಿದ್ದು, ಡಯಾಬಿಟಿಸ್ ಮತ್ತು ಇತರೆ ರೋಗಗಳು ಇದ್ದ ಕಾರಣ ಸಹರೋಗಗಳು ಇರುವ ವ್ಯಕ್ತಿಗೆ ಶುಶ್ರೂಷೆ ಮಾಡುವಂತೆಯೇ ಅವರನ್ನು ನೋಡಿಕೊಳ್ಳಲಾಗಿತ್ತು. ಕೊರೋನಾ ವೈರಸ್ ಸೋಂಕಿತ ಮೃತಪಟ್ಟಲ್ಲಿ ಅದು ಕೋವಿಡ್-19 ಸಾವು ಎಂದು ಪರಿಗಣಿಸಬೇಕು ಎಂಬುದು ನಮ್ಮ ಮಾರ್ಗಸೂಚಿ. ಹಾಗೆಯೇ ಒಬ್ಬ ವ್ಯಕ್ತಿ ಒಮಿಕ್ರಾನ್ ಪಾಸಿಟಿವ್ ಎಂಬುದು ತಡವಾಗಿ ತಿಳಿದುಬಂದರೂ ಸಹ ಅದನ್ನು ಒಮಿಕ್ರಾನ್ ಪಾಸಿಟಿವ್ ಕೇಸ್ ಎಂದೇ ಪರಿಗಣಿಸಲಾಗುತ್ತದೆ,” ಎಂದು ಲವ ಅಗರ್ವಾಲ್ ತಿಳಿಸಿದ್ದಾರೆ.
ಒಮಿಕ್ರಾನ್ ಸೋಂಕಿನಿಂದ ಅಸ್ಪತ್ರೆ ಸೇರಿದ್ದ 73 ವರ್ಷದ ವ್ಯಕ್ತಿಗೆ ಜೀನೋಂ ಸೀಕ್ವೆನ್ಸಿಂಗ್ ಮಾಡಿದ ವೇಳೆ ಆತನಿಗೆ ಸೋಂಕು ಬಂದಿರುವುದು ದೃಢಪಟ್ಟಿತ್ತು. ಈತ ಡಿಸೆಂಬರ್ 31ರಂದು ಮೃತಪಟ್ಟಿದ್ದರು ಎಂದು ರಾಜಸ್ಥಾನ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕೋವಿಡ್ ನಂತರದ ನ್ಯುಮೋನಿಯಾ ಜೊತೆಗೆ ಡಯಾಬಿಟಿಸ್ ಮೆಲ್ಲಿಟಸ್, ಹೈಪರ್‌ಟೆನ್ಷನ್ ಮತ್ತು ಹೈಪರ್‌ಥೈರಾಯ್ಡಿಸಂನಿಂದ ಈತ ಮೃತಪಟ್ಟಿದ್ದಾರೆ ಎಂದು ಉದಯ್ಪುರದ ಮುಖ್ಯ ವೈದ್ಯಕೀಯ ಆರೋಗ್ಯಾಧಿಕಾರಿ ಡಾ ದಿನೇಶ್ ಖರಡಿ ತಿಳಿಸಿದ್ದಾರೆ.
ಡಿಸೆಂಬರ್ 15ರಂದು ಕೋವಿಡ್ ಪಾಸಿಟಿವ್ ಎಂದು ಕಂಡು ಬಂದಿದ್ದ ಈ ವ್ಯಕ್ತಿಗೆ ಜ್ವರ, ಕೆಮ್ಮು, ರಿನಿಟಿಸ್ ಲಕ್ಷಣಗಳು ಕಂಡುಬಂದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಈತನ ಸ್ಯಾಂಪಲ್‌ಗಳನ್ನು ಜೀನೋಂ ಸೀಕ್ವೆನ್ಸಿಂಗ್‌ಗೆ ಕಳುಹಿಸಿದಾಗ ಬಂದ ಫಲಿತಾಂಶದಲ್ಲಿ ಈತನಿಗೆ ಒಮಿಕ್ರಾನ್ ರೂಪಾಂತರಿ ವೈರಸ್ ಮೆಟ್ಟಿಕೊಂಡಿರುವುದು ಕಂಡು ಬಂದಿತ್ತು. ಇದೇ ವೇಳೆ, ಡಿಸೆಂಬರ್ 21 ಮತ್ತು 25ರಂದು ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ಇದೇ ವ್ಯಕ್ತಿ ನೆಗೆಟಿವ್ ಕಂಡು ಬಂದಿದ್ದರು.