ನವದೆಹಲಿ: ಅಲೋಪತಿ ವಿರುದ್ಧ ಅವೈಜ್ಞಾನಿಕ ಹೇಳಿಕೆ ನೀಡಿದ್ದ ಬಾಬಾ ರಾಮದೇವ್ ಆಕ್ಷೇಪಾರ್ಹ ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಪತ್ರ ಬರೆದಿದ್ದಾರೆ.
ಬಾಬಾ ರಾಮದೇವ್ ಅಲೋಪತಿ ವಿರುದ್ಧ ಅವೈಜ್ಞಾನಿಕ ಹೇಳಿಕೆ ನೀಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಆಗ್ರಹಿಸಿತ್ತು.
ಅಲೋಪತಿ ವೈದ್ಯ ಪದ್ಧತಿ ಬಗ್ಗೆ ತಿಳಿವಳಿಕೆ ಇಲ್ಲದೆ ಹೇಳಿಕೆ ನೀಡಿದ್ದ ರಾಮದೇವ್ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿತ್ತು. ಎಪಿಡೆಮಿಕ್ ಡಿಸೀಸಸ್ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಲಾಗಿತ್ತು.
ಅಲೋಪತಿ ಅವಿವೇಕಿ ವೈದ್ಯಕೀಯ ವಿಜ್ಞಾನ ಎಂದು ರಾಮದೇವ್ ಹೇಳಿರುವುದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಐಎಂಎ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ, ಹೇಳಿಕೆಯನ್ನು ಹಿಂಪಡೆಯುವಂತೆ ರಾಮ್ ದೇವ್ ಗೆ ಪತ್ರ ಬರೆದಿದೆ. ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಕೊರೋನಾ ವಿರುದ್ಧದ ಹೋರಾಟದಲ್ಲಿ ಹಗಲು-ರಾತ್ರಿ ಕಾರ್ಯನಿರ್ವಹಿಸುತ್ತಿರುವ ಮತ್ತು ದೇಶದ ಎಲ್ಲ ಜನರ ರಕ್ಷಣೆಗಾಗಿ ಹೋರಾಡುತ್ತಿರುವ ವೈದ್ಯರು ಮತ್ತು ಇತರೆ ಆರೋಗ್ಯ ಕಾರ್ಯಕರ್ತರಾದ ಕೊರೋನಾ ಯೋಧರನ್ನು ಅಗೌರವಗೊಳಿಸುವ ಮೂಲಕ ಅವರ ಭಾವನೆಗೆ ಘಾಸಿಯಾಗಿದೆ. ಈ ಹಿನ್ನೆಲೆಯಲ್ಲಿ ಯೋಗ ಗುರು ರಾಮದೇವ್ ಅವರ ಹೇಳಿಕೆಯನ್ನು ಹಿಂಪಡೆಯುವಂತೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.