
ಆರೋಗ್ಯವೇ ಭಾಗ್ಯ ಎಂಬ ಮಾತು ಹಿಂದಿನಿಂದಲೂ ಇದೆ. ಆರೋಗ್ಯವನ್ನು ಕಾಪಾಡಿಕೊಳ್ಳುವುದೆಂದರೆ, ಕೇವಲ ದೈಹಿಕವಾಗಿ ಸದೃಢರಾಗುವುದಲ್ಲ, ಮಾನಸಿಕ ಆರೋಗ್ಯವೂ ಮುಖ್ಯ.
ದೇಹ ಮತ್ತು ಮನಸ್ಸು ಸರಿಯಾಗಿದ್ದರೆ, ಎಲ್ಲವನ್ನೂ ಸುಲಭವಾಗಿ ನಿರ್ವಹಿಸಬಹುದು. ಇತ್ತೀಚೆಗೆ ಬದಲಾದ ಜೀವನ ಶೈಲಿ ಮತ್ತು ಒತ್ತಡಗಳಿಂದಾಗಿ ಅನೇಕರು ಕಾಯಿಲೆಗೆ ತುತ್ತಾಗುತ್ತಾರೆ. ವಿಶ್ರಾಂತಿ ಇಲ್ಲದ ದುಡಿಮೆ, ಒತ್ತಡದಲ್ಲಿ ಮಾಡುವ ಕೆಲಸ ಮೊದಲಾದವು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿಯೇ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಒತ್ತು ನೀಡಬೇಕೆಂದು ಬಲ್ಲವರು ಹೇಳುತ್ತಾರೆ.
ಪ್ರತಿದಿನ ವಾಯು ವಿಹಾರ, ಲಘು ವ್ಯಾಯಾಮ ಮಾಡುವುದರಿಂದ ದಿನವಿಡೀ ಚಟುವಟಿಕೆಯಿಂದ ಇರಬಹುದು. ದೈಹಿಕ ಸದೃಢತೆಗೆ ಕಸರತ್ತು ನಡೆಸುವಂತೆ ಮಾನಸಿಕ ಸದೃಢತೆಗೆ ಕೊಂಚ ವಿಶ್ರಾಂತಿ, ಧ್ಯಾನ ಅವಶ್ಯಕ. ಮಾನಸಿಕವಾಗಿ ಸದೃಢವಾಗಿದ್ದವರು ಉಲ್ಲಸಿತರಾಗಿರುತ್ತಾರೆ. ಲವಲವಿಕೆಯಿಂದ ಕೂಡಿರುತ್ತಾರೆ. ಇದಕ್ಕೆ ಒಂದಿಷ್ಟು ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು.
ಸದಾ ಕಾಲ ಒತ್ತಡದ ನಡುವೆ ಕೆಲಸ ಮಾಡುವಾಗ, ಮಧ್ಯೆ 5 ನಿಮಿಷ ಬಿಡುವು ತೆಗೆದುಕೊಳ್ಳಿ. ಕುಳಿತಲ್ಲೇ ಕಣ್ಣು ಮುಚ್ಚಿ ವಿಶ್ರಾಂತಿ ಪಡೆಯಿರಿ. ವಾರದ ಬಿಡುವಿನಲ್ಲಿ ಒಂದಿಷ್ಟು ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಇದರಿಂದ ಏಕತಾನತೆಯಿಂದ ಹೊರಬರಲು ಸಾಧ್ಯವಾಗುತ್ತದೆ. ಮರುದಿನದ ಕೆಲಸವನ್ನು ಹೊಸ ಉತ್ಸಾಹದೊಂದಿಗೆ ಮಾಡಲು ಸಹಕಾರಿಯಾಗುತ್ತದೆ. ಒಂದೇ ಸಮನೆ ಒತ್ತಡದಲ್ಲಿ ಕೆಲಸ ಮಾಡುವ ಬದಲಿಗೆ ಮಧ್ಯೆ ಒಂದಿಷ್ಟು ಬಿಡುವು ಪಡೆದು ಕೆಲಸ ಮಾಡಿ. ಕೆಲಸವನ್ನು ಒತ್ತಡವೆಂದು ಭಾವಿಸದೆ ಖುಷಿಯಿಂದಲೇ ಮಾಡಿದಲ್ಲಿ ಹೆಚ್ಚು ಕೆಲಸ ಮಾಡಿದರೂ ಶ್ರಮ ಎನಿಸುವುದಿಲ್ಲ.