ನವದೆಹಲಿ: ಸೋಮವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಆರೋಗ್ಯ ವಿಮೆ ತೆರಿಗೆಯನ್ನು ಶೇಕಡ 18 ರಿಂದ ಶೇಕಡ 5ಕ್ಕೆ ಇಳಿಕೆ ಮಾಡುವ ಅಥವಾ ತೆರಿಗೆ ರದ್ದುಗೊಳಿಸುವ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗಿದೆ.
ಆರೋಗ್ಯ ವಿಮೆ ಕಂತಿನ ಮೇಲೆ ವಿಧಿಸಲಾಗುತ್ತಿರುವ ಶೇಕಡ 18ರಷ್ಟು ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ರದ್ದುಗೊಳಿಸಬೇಕೆಂಬ ಆಗ್ರಹ ಕೇಳಿ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಎಸ್‌ಟಿ ಮಂಡಳಿ ತೆರಿಗೆ ಭಾರ ಇಳಿಸುವುದು ಬಹುತೇಕ ಖಚಿತವಾಗಿದೆ.
ಆರೋಗ್ಯ ವಿಮೆ ತೆರಿಗೆಯನ್ನು ಶೇಕಡ 18ರಿಂದ ಶೇಕಡ 5ಕ್ಕೆ ಅಥವಾ ಶೂನ್ಯಕ್ಕೆ ಇಳಿಕೆ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಬಗ್ಗೆ ಭಿನ್ನಾಭಿಪ್ರಾಯ ಮೂಡಿದ ಹಿನ್ನೆಲೆಯಲ್ಲಿ ನವೆಂಬರ್ ನಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲು ಜಿಎಸ್‌ಟಿ ಮಂಡಳಿ ಸಭೆ ನಿರ್ಧರಿಸಿದೆ. ಅಲ್ಲದೆ ಈ ಬಗ್ಗೆ ಅಂತಿಮ ಶಿಫಾರಸುಗಳನ್ನು ಸಲ್ಲಿಸಲು ಬಿಹಾರ ಉಪ ಮುಖ್ಯಮಂತ್ರಿ ಸಮರ್ಥ್ ಚೌಧರಿ ನೇತೃತ್ವದ ಸಚಿವರ ಸಮಿತಿ ರಚಿಸಿದ್ದು, ಅಕ್ಟೋಬರ್ ಅಂತ್ಯದ ವೇಳೆಗೆ ಈ ಸಮಿತಿ ವರದಿ ಸಲ್ಲಿಸಲಿದೆ. ನವೆಂಬರ್ ನಲ್ಲಿ ನಡೆಯುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಇದನ್ನು ಆಧರಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಭೆಯ ಬಳಿಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಆರೋಗ್ಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮಾಧ್ಯಮ ವರ್ಗದವರ ಪಾಲಿಗೆ ವರದಾನವಾದ ಆರೋಗ್ಯ ವಿಮೆ ಮೇಲೆ ಜಿಎಸ್‌ಟಿ ರದ್ದುಪಡಿಸಬೇಕೆಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದಕ್ಕೆ ಮೊದಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಪತ್ರ ಬರೆದು ಒತ್ತಾಯಿಸಿದ್ದರು.