ಬೆಂಗಳೂರು: ಅಶಿಸ್ತು ಪ್ರದರ್ಶಿಸಿದ ಆರೋಪದ ಮೇಲೆ ಆರೋಗ್ಯ ಇಲಾಖೆ ಉಪ ನಿರ್ದೇಶಕ ಡಾ.ಆರ್. ನಾರಾಯಣ್ ಅವರನ್ನು ಅಮಾನತು ಮಾಡಿ ಆದೇಶಿಸಲಾಗಿದೆ.
ಸ್ಥಳ ನಿರೀಕ್ಷೆಯಲ್ಲಿದ್ದ ನಾರಾಯಣ್ ಅವರಿಗೆ ಎರಡು ಬಾರಿ ಸ್ಥಳ ನಿಯೋಜನೆಗಾಗಿ ಕೌನ್ಸೆಲಿಂಗ್ ಗೆ ಹಾಜರಾಗಲು ಸೂಚಿಸಲಾಗಿತ್ತು. ಆರೋಗ್ಯ ಇಲಾಖೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವುದರಲ್ಲಿ ಅವರು ಆಶಿಸ್ತು ಪ್ರದರ್ಶಿಸಿದ್ದಾರೆ. ಎರಡು ಬಾರಿಯೂ ಕೌನ್ಸೆಲಿಂಗ್ ಗೆ ಗೈರು ಹಾಜರಾಗಿದ್ದಾರೆ. ಅಲ್ಲದೇ, ಚುನಾವಣಾ ಕರ್ತವ್ಯ ವರದಿ ಮಾಡಿಕೊಳ್ಳದೆ ನಿರ್ಲಕ್ಷ ತೋರಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಅವರ ಮೇಲೆ ಇಲಾಖಾ ಕ್ರಮ ಬಾಕಿ ಇರಿಸಿ ತಕ್ಷಣದಿಂದ ಅನ್ವಯವಾಗುವಂತೆ ಅಮಾನತು ಮಾಡಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಅಮಾನತು ಅವಧಿಯಲ್ಲಿ ನಿಯಮಾನಸಾರ ಜೀವನಾಧಾರ ಭತ್ಯೆಗೆ ವೈದ್ಯಾಧಿಕಾರಿ ಅರ್ಹರಾಗಿರುತ್ತಾರೆ. ಅಮಾನತು ಅವಧಿಯಲ್ಲಿ ಕಡ್ಡಾಯವಾಗಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆದುಕೊಳ್ಳದೆ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಹೇಳಲಾಗಿದೆ.