ಬೆಂಗಳೂರು: ರಾಜ್ಯದಲ್ಲಿ ಎಲ್ಲಾ ಬಗೆಯ ಹುಕ್ಕಾ ಉತ್ಪನ್ನಗಳ ಮಾರಾಟ, ಸೇವನೆ, ಜಾಹೀರಾತು, ಸೇವಿಸಲು ಪ್ರಚೋದನೆ, ಸಂಗ್ರಹಣೆ ನಿಷೇಧಿಸಿ ಆರೋಗ್ಯ ಇಲಾಖೆ ವತಿಯಿಂದ ಬುಧವಾರ ಆದೇಶ ಹೊರಡಿಸಲಾಗಿದೆ.
ಸಂವಿಧಾನದ 47ನೇ ವಿಧಿಯಲ್ಲಿ ಸಾರ್ವಜನಿಕರ ಆರೋಗ್ಯ ಕಾಪಾಡಲು ರಾಜ್ಯ ಸರ್ಕಾರಕ್ಕೆ ಇರುವ ಅಧಿಕಾರ ಬಳಸಿಕೊಂಡು ಆರೋಗ್ಯ ಇಲಾಖೆ ಈ ಆದೇಶ ಹೊರಡಿಸಿದೆ. ತಂಬಾಕು ಅಥವಾ ನಿಕೋಟಿನ್ ಒಳಗೊಂಡ ಹುಕ್ಕಾ, ತಂಬಾಕು ರಹಿತ ಮತ್ತು ನಿಕೋಟಿನ್ ರಹಿತ ಹುಕ್ಕಾ, ಸ್ವಾದಭರಿತ ಮೊಲಾಸಿಸ್ ಒಳಗೊಂಡ ಹುಕ್ಕಾಗಳನ್ನು ನಿಷೇಧಿಸಲಾಗಿದೆ.
ಆದೇಶ ಉಲ್ಲಂಘಿಸಿದವರ ವಿರುದ್ಧ ಕೋಟ್ಪಾ ಕಾಯ್ದೆ, ಮಕ್ಕಳ ಆರೈಕೆ ಮತ್ತು ರಕ್ಷಣೆ ಕಾಯ್ದೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, ಕರ್ನಾಟಕ ವಿಷ ಸ್ವಾಧೀನ ಮತ್ತು ಮಾರಾಟ ಕಾಯ್ದೆ, ಭಾರತೀಯ ದಂಡ ಸಂಹಿತೆ, ಅಗ್ನಿ ನಿಯಂತ್ರಣ ಮತ್ತು ಸುರಕ್ಷತಾ ಕಾಯ್ದೆಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.
ಹುಕ್ಕಾ ವ್ಯಸನಕಾರಿ ಉತ್ಪನ್ನ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದ್ದು, ಹುಕ್ಕಾ ಸೇವನೆ ಆರೋಗ್ಯಕ್ಕೆ ಅತ್ಯಂತ ಮಾರಕವಾಗಿದೆ ಇವೆಲ್ಲಾ ಕಾರಣಗಳಿಂದ ಹುಕ್ಕಾ ಬ್ಯಾನ್ ಮಾಡಲಾಗಿದೆ ಎಂದು ಹೇಳಲಾಗಿದೆ.