ತುಮಕೂರು: ಹೊರಗುತ್ತಿಗೆ ಪದ್ಧತಿಯಲ್ಲೂ ಮೀಸಲಾತಿ ತರಲು ಸರ್ಕಾರ ಮುಂದಾಗಿರುವುದಕ್ಕೆ ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರು ವಿರೋಧ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಆರೋಗ್ಯ ಇಲಾಖೆಯ ವಿವಿಧ ವೃಂದದ ಹೊರಗುತ್ತಿಗೆ ನೌಕರರು ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೊರಗುತ್ತಿಗೆಯಲ್ಲಿ ಮೀಸಲಾತಿ ಜಾರಿ ಆದರೆ ಬೀದಿ ಪಾಲಾಗುತ್ತೇವೆ. ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಕುಟುಂಬಗಳು ಬೀದಿ ಪಾಲಾಗುತ್ತವೆ. ಯಾವುದೇ ಕಾರಣಕ್ಕೂ ಹೊರಗುತ್ತಿಗೆಯಲ್ಲಿ ಮೀಸಲಾತಿ ತರಬಾರದು ಎಂದು ಒತ್ತಾಯಿಸಿದ್ದಾರೆ.
ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಷಡಾಕ್ಷರಿ ಅವರು ಹೊರಗುತ್ತಿಗೆ ನೌಕರರ ಬಗ್ಗೆ ಲಘುವಾಗಿ ಮಾತನಾಡಿರುವುದಕ್ಕೆ ವಿರೋಧವಿದೆ. ಹೊರಗುತ್ತಿಗೆ ಆಧಾರದಲ್ಲಿ ಆರೋಗ್ಯ ಇಲಾಖೆಯಲ್ಲಿ 9 ಸಾವಿರಕ್ಕೂ ಹೆಚ್ಚು ನೌಕರರು ಕೆಲಸ ಮಾಡುತ್ತಿದ್ದಾರೆ. ಸರ್ಕಾರವು ಖಾಸಗಿ ಸಂಸ್ಥೆಗೆ ಟೆಂಡರ್ ನೀಡಿ ನೌಕರರನ್ನು ಶೋಷಿಸುತ್ತಿದೆ. ಖಾಸಗಿ ಸಂಸ್ಥೆ ಬದಲು ಸರ್ಕಾರದಡಿ ಬರುವ ಸಂಸ್ಥೆಗೆ ಟೆಂಡರ್ ನೀಡಬೇಕು. ಸೇವಾ ಭದ್ರತೆ ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆ ಈಡೇರಿಸಬೇಕು ಎಂದು ನೌಕರರು ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ವಾಹನ ಚಾಲಕರು, ಡೇಟಾ ಎಂಟ್ರಿ ಆಪರೇಟರ್, ಸ್ವಚ್ಛತಾ ಸಿಬ್ಬಂದಿ, ಗ್ರೂಪ್ ಡಿ ಹುದ್ದೆಗಳನ್ನು ಹೊರಗುತ್ತಿಗೆ ಮೂಲಕ ಭರ್ತಿ ಮಾಡಿಕೊಳ್ಳುವಾಗ ಮೀಸಲಾತಿ ಕಲ್ಪಿಸಲು ಆದೇಶ ಹೊರಡಿಸಲಾಗಿದೆ. ಹೊರಗುತ್ತಿಗೆ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳಿಗೆ ನಿಗದಿಪಡಿಸಿದ ಮೀಸಲಾತಿ ಪ್ರಮಾಣದಲ್ಲಿ ಕನಿಷ್ಠ ಶೇಕಡ 33 ರಷ್ಟು ಮಹಿಳೆಯರನ್ನು ನೇಮಕಾತಿ ಮಾಡಿಕೊಳ್ಳಲು ಸೂಚಿಸಲಾಗಿದೆ.