
ಬೆಂಗಳೂರು: ರಾಜ್ಯದ ಎಲ್ಲಾ ಆರೋಗ್ಯ ಕೇಂದ್ರದಲ್ಲೂ ‘ಆಯುಷ್ಮಾನ್ ಭಾರತ್ -ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆ’ಯಡಿ ಕಾರ್ಡ್ ವಿತರಿಸಲು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ರಾಜ್ಯದಲ್ಲಿ ಆಯುಷ್ಮಾನ್ ಭಾರತ್ -ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯಡಿ 5.69 ಕೋಟಿ ಆರೋಗ್ಯ ಕಾರ್ಡ್ ವಿತರಿಸಬೇಕಿದೆ. ಇದುವರೆಗೆ 1.54 ಕೋಟಿ ಕಾರ್ಡ್ ಮಾತ್ರ ವಿತರಿಸಲಾಗಿದ್ದು, ಬಾಕಿ 4.15 ಕೋಟಿ ಜನರಿಗೆ ಶೀಘ್ರವಾಗಿ ಕಾರ್ಡ್ ಒದಗಿಸುವ ಉದ್ದೇಶದಿಂದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಆಯುಷ್ಮಾನ್ ಭಾರತ್ ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಕಾರ್ಡ್ ನೋಂದಣಿ ಮಾಡಿ ಸಾಫ್ಟ್ ಕಾಪಿ ನೀಡುವಂತೆ ಆರೋಗ್ಯ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಎಲ್ಲಾ ಗ್ರಾಮಾಂತರ ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಯುಷ್ಮಾನ್ ಭಾರತ್ -ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಗುರುತಿನ ಚೀಟಿ ನೀಡಲು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಆರೋಗ್ಯ ಕಾರ್ಡ್ ವಿತರಿಸಲು ವ್ಯವಸ್ಥೆ ಮಾಡಬೇಕು. ಈಗಿರುವ ವ್ಯವಸ್ಥೆ ಮೂಲಕ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಕಾರ್ಡ್ ನೋಂದಣಿ ಸಾಧ್ಯವಿಲ್ಲ. ಹೀಗಾಗಿ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.
ರೋಗಿಯ ಬಳಿ ಸ್ಮಾರ್ಟ್ ಫೋನ್ ಇದ್ದರೆ ಕಾರ್ಡ್ ಸೃಜನೆ ಆದ ನಂತರ ಅವರ ಫೋನಿಗೆ ಸಾಫ್ಟ್ ಕಾಪಿ ಬರುತ್ತದೆ. ಮುದ್ರಿತ ಕಾರ್ಡ್ ಸಿಗುವವರೆಗೆ ಸಾಫ್ಟ್ ಕಾಪಿಯನ್ನು ಎಲ್ಲ ಉದ್ದೇಶಗಳಿಗೂ ಬಳಸಲಾಗುತ್ತದೆ. ಮುದ್ರಿತ ಕಾರ್ಡ್ ಬಗ್ಗೆ ಮುಂದಿನ ಆದೇಶದಲ್ಲಿ ಚಲಿಸಲಾಗುವುದು ಎಂದು ಹೇಳಲಾಗಿದೆ.