alex Certify BIG NEWS: ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾದ ಚಿಕ್ಕಬಳ್ಳಾಪುರ ಬೃಹತ್ ಆರೋಗ್ಯ ಮೇಳ ವಿಶ್ವದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾದ ಚಿಕ್ಕಬಳ್ಳಾಪುರ ಬೃಹತ್ ಆರೋಗ್ಯ ಮೇಳ ವಿಶ್ವದಾಖಲೆ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಉಚಿತ ಬೃಹತ್ ಆರೋಗ್ಯ  ಮೇಳದಲ್ಲಿ ನಿರೀಕ್ಷೆಗೂ ಮೀರಿ ಸುಮಾರು 1.50 ಲಕ್ಷಕ್ಕೂ  ಹೆಚ್ಚು  ಜನರು ನೊಂದಣಿಯಾಗಿ ಈ ಮೇಳ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್   ನಲ್ಲಿ ದಾಖಲಾಗುವ ಮೂಲಕ ಜಾಗತಿಕ ದಾಖಲೆ ಬರೆದಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ನಗರ ಹೊರವಲಯದ ಎಸ್‌ಜೆಸಿಐಟಿ ಕಾಲೇಜಿನ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಡಾ.ಕೆ.ಸುಧಾಕರ್ ಫೌಂಡೇಷನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಉಚಿತ ಬೃಹತ್ ಆರೋಗ್ಯ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಒಂದೇ ಸೂರಿನಡಿ ತಪಾಸಣೆ, ಚಿಕಿತ್ಸೆ ಮತ್ತು ಔಷಧಗಳ ವಿತರಣೆಯಾಗಲು ಆರೋಗ್ಯ ಮೇಳಗಳು ಪೂರಕವಾಗಿವೆ. ಮುಂದುವರೆದ ದೇಶಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯಿದ್ದು, ಅಭಿವೃದ್ಧಿಶೀಲ ರಾಷ್ಟ್ರ ಗಳಲ್ಲಿ ಆರೋಗ್ಯದ ಬಗೆಗಿನ ಕಾಳಜಿ ಮತ್ತು ವ್ಯವಸ್ಥೆ ಅಧಿಕವಾಗಬೇಕಾಗಿದೆ. ಎರಡು ದಿನಗಳ ಬೃಹತ್ ಆರೋಗ್ಯ ಮೇಳದಲ್ಲಿ ಸುಮಾರು  1.50 ಲಕ್ಷ ಜನರು ಹೆಸರು ನೊಂದಾಯಿಸುವ ಮೂಲಕ ಜಾಗತಿಕ ಮಟ್ಟದ ದಾಖಲೆ ಬರೆಯಲಾಗಿದೆ. ಈ ಪೈಕಿ ಶೇ.70 ರಷ್ಟು ಜನರ ರಕ್ತ ಮಾದರಿಗಳನ್ನು  ಸಂಗ್ರಹಿಸಿ ಪರೀಕ್ಷೆ ಮಾಡಿರುವುದೂ ದಾಖಲೆಗೆ ಮತ್ತೊಂದು ಕಾರಣವಾಗಿದೆ. ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ಈ ಮೇಳ ದಾಖಲಾಗಿ ಜಾಗತಿಕ ಮಟ್ಟದಲ್ಲಿ ದಾಖಲೆ ಬರೆದಿರುವುದು ಸಂತಸ ತಂದಿದೆ ಎಂದು ತಿಳಿಸಿದರು.

ದೇಶದ ಸಾರ್ವಜನಿಕರ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಎಂಬ ಮಹತ್ವದ ಯೋಜನೆ ಜಾರಿ ಮಾಡಿದೆ. ದೇಶದಲ್ಲಿ ಈವರೆಗೆ ಸುಮಾರು 80 ಕೋಟಿಗೂ ಹೆಚ್ಚು ಜನರಿಗೆ ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆಯಾಗಿದೆ. ರಾಜ್ಯದಲ್ಲಿ ಪ್ರಸ್ತುತ ಜಾರಿಯಿರುವ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ನೊಂದಣಿಯ ವೇಗವನ್ನು ಹೆಚ್ಚಿಸಲಾಗಿದ್ದು, ಇನ್ನು 8 ತಿಂಗಳ ಒಳಗಾಗಿ ರಾಜ್ಯದ ಎಲ್ಲರನ್ನೂ ಈ ಯೋಜನೆಯ ವ್ಯಾಪ್ತಿಗೆ ತರಲಾಗುವುದು. ಆರು ತಿಂಗಳಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ನ ನೊಂದಣಿಯನ್ನು ಉಚಿತವಾಗಿ ಮಾಡಿ ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ತಿಳಿಸಿದರು.

ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳು, ಪೌರಾಡಳಿತ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಎನ್.ನಾಗರಾಜು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಇದೇ ಸಂದರ್ಭದಲ್ಲಿ ಕಣ್ಣಿನ ಪರೀಕ್ಷೆ ನಡೆಸಿದ ಅರ್ಹ ಫಲಾನುಭವಿಗಳಿಗೆ ಸರ್ಕಾರದ ವತಿಯಿಂದ ಉಚಿತ ಕನ್ನಡಕಗಳನ್ನು ಹಾಗೂ ಅಗತ್ಯವಿರುವವರಿಗೆ ಹಲ್ಲಿನ ಸೆಟ್‌ಗಳನ್ನು ಉಚಿತವಾಗಿ ವಿತರಿಸಲಾಯಿತು. ಹೃದಯ, ಮೂಳೆ, ಕಣ್ಣು, ಶ್ವಾಸಕೋಶ, ಕಿವಿ, ಮೂಗು, ಗಂಟಲು ಸೇರಿದಂತೆ ಹಲವು ವಿಭಾಗಗಳಲ್ಲಿ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಹಾಗೂ ಉಚಿತ ಔಷಧಗಳನ್ನು ನೀಡಲಾಯಿತು.

14 ಖಾಸಗಿ ವೈದ್ಯಕೀಯ ಕಾಲೇಜುಗಳು, 20 ಕ್ಕೂ ಹೆಚ್ಚು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳು, 12 ಕಣ್ಣಿನ ಚಿಕಿತ್ಸೆಯ ಸಂಚಾರಿ ವಾಹನಗಳು ಹಾಗೂ 15 ದಂತ ಚಿಕಿತ್ಸೆಯ ಸಂಚಾರಿ ವಾಹನಗಳು ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜುಗಳು, ವಿವಿಧ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿ ಮೇಳದಲ್ಲಿ ಭಾಗವಹಿಸಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...