ಬೆಂಗಳೂರು: ನಿವೃತ್ತ ಪೊಲೀಸ್ ಕುಟುಂಬದವರಿಗೆ ಆರೋಗ್ಯ ಭಾಗ್ಯ ಕಲ್ಪಿಸುವ ನಿಟ್ಟಿನಲ್ಲಿ ಗುಂಪು ವಿಮೆ ಅನುಷ್ಠಾನಕ್ಕೆ ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿ ಕ್ಷೇಮ ನಿಧಿ ಕೇಂದ್ರ ಸಮಿತಿ ನಿರ್ಧರಿಸಿದೆ.
ನಿವೃತ್ತ ಪೊಲೀಸರ 14,000 ಕುಟುಂಬಗಳಿಗೆ ಆರೋಗ್ಯ ಸೌಲಭ್ಯ ಕಲ್ಪಿಸಲು ನಿವೃತ್ತ ಪೊಲೀಸ್ ಅಧಿಕಾರಿ ಸಿಬ್ಬಂದಿ ಕ್ಷೇಮ ನಿಧಿ ಕೇಂದ್ರ ಸಮಿತಿ, ನಿವೃತ್ತ ಪೊಲೀಸ್ ಆರೋಗ್ಯ ಯೋಜನೆ ಟ್ರಸ್ಟ್ ನಿಂದ ನಿರ್ಣಯ ಕೈಗೊಳ್ಳಲಾಗಿದೆ. ನಿವೃತ್ತ ಪೊಲೀಸ್ ಕುಟುಂಬಗಳಿಗೆ ಅನುಕೂಲವಾಗುವಂತೆ ಗುಂಪು ವಿಮೆ ಜಾರಿಗೊಳಿಸುವ ಜೊತೆಗೆ ಸೇವೆಯಲ್ಲಿದ್ದಾಗ ಆರೋಗ್ಯ ಭಾಗ್ಯ ಯೋಜನೆ ಸೌಲಭ್ಯ ಪಡೆದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ನಿವೃತ್ತ ಪೊಲೀಸ್ ಆರೋಗ್ಯ ಯೋಜನೆಯನ್ನು ಸೌಲಭ್ಯ ಪಡೆದುಕೊಳ್ಳಲು ಅರ್ಹರಿದ್ದಾರೆ ಎಂದು ಘೋಷಿಸಲಾಗಿದೆ.
ನಿವೃತ್ತ ಪೊಲೀಸ್ ಕುಟುಂಬಗಳಿಗೆ ಇದುವರೆಗೆ ಗಂಭೀರ ಕಾಯಿಲೆಗೆ 2 ಲಕ್ಷ ರೂ., ಸಾಮಾನ್ಯ ಕಾಯಿಲೆಗೆ ಒಂದು ಲಕ್ಷ ರೂ.ನಂತೆ ಆಸ್ಪತ್ರೆ ವೆಚ್ಚ ನೀಡಲಾಗುತ್ತಿದೆ. ಸಾಮಾನ್ಯ ಕಾಯಿಲೆಗೆ ಸೌಲಭ್ಯ ಪಡೆಯುವ ನಿವೃತ್ತ ಪತಿ, ಪತ್ನಿಯರ ಸಂಖ್ಯೆ ಜಾಸ್ತಿ ಇದ್ದು, ಆಸ್ಪತ್ರೆ ವೆಚ್ಚ ದುಬಾರಿಯಾಗಿರುವುದರಿಂದ ಸಾಮಾನ್ಯ ಚಿಕಿತ್ಸೆಗೂ ಎರಡು ಲಕ್ಷ ರೂ.ವರೆಗೆ ಸೌಲಭ್ಯ ಕಲ್ಪಿಸುವಂತೆ ಡಿಜಿ ಐಜಿಪಿ ಡಾ. ಅಲೋಕ್ ಮೋಹನ್ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ನಿವೃತ್ತ ಪೊಲೀಸ್ ಆರೋಗ್ಯ ಯೋಜನೆಗೂ ಆನ್ಲೈನ್ ವ್ಯವಸ್ಥೆ ವಿಸ್ತರಿಸಲು ಸೂಚಿಸಲಾಗಿದೆ. ಅಗತ್ಯ ಮಾಹಿತಿ ಸಂಗ್ರಹಿಸಿ ಸಂಬಂಧಿಸಿದ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಜವಾಬ್ದಾರಿಯನ್ನು ಎನ್.ಸಿ.ಆರ್.ಬಿ. ವಿಭಾಗದ ಎಡಿಜಿಪಿಗೆ ವಹಿಸಲಾಗಿದೆ.