ಬಹುತೇಕರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ-ಕಾಫಿ ಸೇವನೆ ಮಾಡ್ತಾರೆ. ಇದ್ರಿಂದ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಆದ್ರೆ ಖಾಲಿ ಹೊಟ್ಟೆಯಲ್ಲಿ ಆರೋಗ್ಯಕರ ಮೆಂತ್ಯ ನೀರು ಸೇವನೆ ಮಾಡುವುದ್ರಿಂದ ಸಾಕಷ್ಟು ಪ್ರಯೋಜನವಿದೆ. ಮಧುಮೇಹ ನಿಯಂತ್ರಣದ ಜೊತೆ ತೂಕ ಇಳಿಸಲು ಇದು ನೆರವಾಗುತ್ತದೆ.
ಮೆಂತ್ಯ ನೀರನ್ನು ಎರಡು ವಿಧಾನಗಳಲ್ಲಿ ನೀವು ಸೇವನೆ ಮಾಡಬಹುದು. ಒಂದು ಚಮಚ ಮೆಂತ್ಯ ಬೀಜವನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ ಮುಚ್ಚಿಡಿ. 10 ನಿಮಿಷದ ನಂತ್ರ ಆ ನೀರನ್ನು ಸೇವನೆ ಮಾಡಿ. ಇದಕ್ಕೆ ಜೇನುತುಪ್ಪ ಬೆರೆಸಿ ಕುಡಿಯಬಹುದು. ಇನ್ನೊಂದು ವಿಧಾನವೆಂದ್ರೆ ಮೆಂತ್ಯಯನ್ನು ಬಾಣಲೆಯಲ್ಲಿ ಹುರಿದು, ಪುಡಿ ಮಾಡಿಟ್ಟುಕೊಳ್ಳಿ. ಬೆಳಿಗ್ಗೆ ಬಿಸಿ ನೀರಿಗೆ ಮೆಂತ್ಯ ಪುಡಿ ಸೇರಿಸಿ ಸೇವನೆ ಮಾಡಿ.
ಪ್ರತಿ ನಿತ್ಯ ಮೆಂತ್ಯ ನೀರಿನ ಸೇವೆನೆಯಿಂದ ಸಾಕಷ್ಟು ಪ್ರಯೋಜನವಿದೆ. ಟೈಪ್ 2 ಡಯಾಬಿಟಿಸ್ ರೋಗಿಗಳು ಮೆಂತ್ಯ ನೀರು ಕುಡಿದರೆ, ದೇಹದಲ್ಲಿ ಇನ್ಸುಲಿನ್ ಸ್ರವಿಕೆ ಉತ್ತಮವಾಗುತ್ತದೆ. ದೇಹದಿಂದ ಸಕ್ಕರೆ ಹೀರಿಕೊಳ್ಳುವ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ಅಜೀರ್ಣ ಸಮಸ್ಯೆ ಇರುವವರು ಇದನ್ನು ಸೇವನೆ ಮಾಡಬೇಕು. ಹೊಟ್ಟೆಗೆ ಸಂಬಂಧಿಸಿದ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಿಸಲು ಮೆಂತ್ಯ ಸಹಕಾರಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತ್ಯ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ.
ಮೂತ್ರಪಿಂಡದ ಸಮಸ್ಯೆ ಇರುವವರು ಮೆಂತ್ಯ ನೀರನ್ನು ಕುಡಿಯಬೇಕು. ಮೂತ್ರಪಿಂಡದಲ್ಲಿರುವ ಕಲ್ಲುಗಳನ್ನು ಕರಗಿಸಲು ಇದು ನೆರವಾಗುತ್ತದೆ.
ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಮೆಂತ್ಯ ನೀರು ಕುಡಿಯುವುದರಿಂದ ಚಯಾಪಚಯ ಕ್ರಿಯೆ ಸುಧಾರಿಸುತ್ತದೆ. ತೂಕ ಇಳಿಕೆಗೆ ನೆರವಾಗುತ್ತದೆ.
ಎದೆ ಹಾಲು ಹೆಚ್ಚಾಗಬೇಕೆನ್ನುವವರು ಮೆಂತ್ಯ ನೀರಿನ ಸೇವನೆ ಮಾಡಬೇಕು. ಮೆಂತ್ಯ ಬೀಜಗಳಿಂದ ತಯಾರಿಸಿದ ಗಿಡಮೂಲಿಕೆ ಚಹಾವನ್ನು ಸಹ ಕುಡಿಯಬಹುದು.