ನವದೆಹಲಿ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಹಿಂದೂ ಧರ್ಮದಲ್ಲಿ ದೇವಸ್ಥಾನ ಎಂದು ಕರೆಯಲು ಬಂಡೆ, ಕೆಂಪು ಧ್ವಜ ಮತ್ತು ಮರ ಮಾತ್ರ ಸಾಕು ಎಂದು ಹಿಂದೂ ಆಸ್ಥೆಯನ್ನು ಲೇವಡಿ ಮಾಡಿದ್ದಾರೆ.
ದೇವಸ್ಥಾನಗಳ ಕುರಿತಾದ ಅಖಿಲೇಶ್ ಯಾದವ್ ಹೇಳಿಕೆಗೆ ಬಿಜೆಪಿ ಕಿಡಿಕಾರಿದೆ. ದೇವಸ್ಥಾನಗಳ ಕುರಿತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಭಾರತೀಯ ಜನತಾ ಪಕ್ಷ, ಇಂತಹ ಹೇಳಿಕೆ ನೀಡುವ ಮೂಲಕ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಿಂದೂ ನಂಬಿಕೆಯನ್ನು ಲೇವಡಿ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಅಯೋಧ್ಯೆಯಲ್ಲಿ ಮರದ ಕೆಳಗೆ ಕಲ್ಲು ಮತ್ತು ಕೆಂಪು ಧ್ವಜವನ್ನು ಇಟ್ಟುಕೊಂಡು ಎಲ್ಲಿ ಬೇಕಾದರೂ ದೇವಾಲಯವನ್ನು ಮಾಡಬಹುದು. ಬಿಜೆಪಿ ತನ್ನ ವಿಭಜಕ ರಾಜಕೀಯವನ್ನು ಬಳಸುತ್ತಿದೆ. ಜನರ ಗಮನವನ್ನು ಮುಖ್ಯ ವಿಷಯಗಳಿಂದ ಬೇರೆಡೆಗೆ ತಿರುಗಿಸಲು ದ್ವೇಷವನ್ನು ಸೃಷ್ಟಿಸುತ್ತಿದೆ. ಹಣದುಬ್ಬರ ಏರಿಕೆಯ ಪ್ರಶ್ನೆಯಿಂದ ಬಿಜೆಪಿ ಹಿಂದೆ ಸರಿಯುತ್ತಿದೆ. ಬಿಜೆಪಿ –ಆರ್.ಎಸ್.ಎಸ್. ಸಮಾಜವನ್ನು ವಿಭಜಿಸುವ ಷಡ್ಯಂತ್ರದಲ್ಲಿ ತೊಡಗಿವೆ ಎಂದು ಟೀಕಿಸಿದ್ದರು.
ಇದಕ್ಕೆ ಆಕ್ಷೇಪಿಸಿದ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಅವರು, ಶ್ರೀ ಕೃಷ್ಣನು ತನ್ನ ಕನಸಿನಲ್ಲಿ ಬರುತ್ತಾನೆ ಎಂದು ಹೇಳುವ ಅಖಿಲೇಶ್ ಯಾದವ್, ಹಿಂದೂ ಆಸ್ಥೆಯನ್ನೂ ಲೇವಡಿ ಮಾಡಿದ್ದಾರೆ. ಮುಗ್ಧ ರಾಮಭಕ್ತರ ಮೇಲೆ ಗುಂಡು ಹಾರಿಸುವ ಮೂಲಕ ರಾಜಕೀಯ ಮಾಡುವ ಯಾರೋ ಒಬ್ಬರು ಹಿಂದೂ ಆಸ್ಥೆಯನ್ನು ಈ ರೀತಿಯ ಅಪಹಾಸ್ಯ ಮಾಡುವುದರಲ್ಲಿ ಆಶ್ಚರ್ಯವಿಲ್ಲ ಎಂದು ಹೇಳಿದ್ದಾರೆ.
ಕೆಲವು ರಾಜಕಾರಣಿಗಳು ಯಾವಾಗಲೂ ಹಿಂದೂ ನಂಬಿಕೆಯನ್ನು ಅಪಹಾಸ್ಯ ಮಾಡುತ್ತಾರೆ, ಆದರೆ ಬೇರೆ ಯಾವುದೇ ಧರ್ಮದ ಬಗ್ಗೆ ಮಾತನಾಡುವುದಿಲ್ಲ. ಮತ ಬ್ಯಾಂಕ್ ಗಾಗಿ ಇಂತಹ ನಾಯಕರಲ್ಲಿ ಇರುವ ಹಿಂದೂ ದ್ವೇಷವನ್ನು ಇದು ತೋರಿಸಿದೆ ಎಂದು ಪೂನವಾಲಾ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ, ಕೆಲವು ಮಸೀದಿಗಳನ್ನು ದೇವಾಲಯಗಳ ಸ್ಥಳಗಳಲ್ಲಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ವಿವಿಧ ಹಿಂದೂ ಗುಂಪುಗಳು ನ್ಯಾಯಾಲಯಗಳಲ್ಲಿ ಅರ್ಜಿಗಳನ್ನು ಸಲ್ಲಿಸಿವೆ. ಇಂತಹ ಬೆಳವಣಿಗೆ ನಡುವೆ ಅಖಿಲೇಶ್ ಹೀಗೊಂದು ಹೇಳಿಕೆ ನೀಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.