alex Certify ಮಾಂಸದಂಗಡಿಯಲ್ಲಾದ ಜಗಳದಲ್ಲಿ ವ್ಯಕ್ತಿ ಹತ್ಯೆ; ಇದಾದ ಬಳಿಕ ಖರೀದಿಸಿದ್ದನ್ನು ಆರಾಮಾಗಿ ತೆಗೆದುಕೊಂಡ ಹೋದ ಹಂತಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಂಸದಂಗಡಿಯಲ್ಲಾದ ಜಗಳದಲ್ಲಿ ವ್ಯಕ್ತಿ ಹತ್ಯೆ; ಇದಾದ ಬಳಿಕ ಖರೀದಿಸಿದ್ದನ್ನು ಆರಾಮಾಗಿ ತೆಗೆದುಕೊಂಡ ಹೋದ ಹಂತಕ….!

ಉತ್ತರ ಪ್ರದೇಶದ ನೋಯ್ಡಾದಲ್ಲಿ, ಗುರುವಾರ ಮಧ್ಯಾಹ್ನ ಮಾಂಸ ಖರೀದಿಸಲು ಬಂದಿದ್ದ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲಾಗಿದೆ. ಅಂಗಡಿ ಹೊರಗೆ ಚಾಕುವಿನಿಂದ ಇರಿದು ಈ ಕೃತ್ಯ ಎಸಗಲಾಗಿದೆ.

ನೋಯ್ಡಾದಲ್ಲಿ ವಾಸಿಸುತ್ತಿರುವ ಮೀರತ್ ಮೂಲದ 35 ವರ್ಷದ ಶಹಜಾದ್ ಮತ್ತು ಅಪರಿಚಿತ ಗ್ರಾಹಕ, ಗುಲ್ಜಾರ್ ಒಡೆತನದ ಅಂಗಡಿಗೆ ಬಂದಿದ್ದರು. ಇಬ್ಬರೂ ಸೇವೆಗಾಗಿ ಕಾಯುತ್ತಿರುವಾಗ, ಕ್ಷುಲ್ಲಕ ಕಾರಣಕ್ಕೆ ಆರಂಭವಾದ ವಾಗ್ವಾದ ಮಾರಣಾಂತಿಕ ಘರ್ಷಣೆಗೆ ತಿರುಗಿದೆ.

ತಾನು ಧರಿಸಿದ್ದ ಟವೆಲ್ ಅನ್ನು ತನಗೆ ನೀಡುವಂತೆ ಶಹಜಾದ್, ಅಪರಿಚಿತ ವ್ಯಕ್ತಿಯನ್ನು ಕೇಳಿದ್ದು ಇದು ಆರೋಪಿಯನ್ನು ಕೆರಳಿಸಿದೆ. ಇದು ಬಿಸಿಯಾದ ವಾಗ್ವಾದಕ್ಕೆ ಕಾರಣವಾಗಿದ್ದು, ಕೋಪದ ಮಧ್ಯೆ, ಸೆಕ್ಟರ್ 117 ರ ಮಾಂಸದಂಗಡಿಯ ಕೌಂಟರ್ನಲ್ಲಿ ಬಿದ್ದಿದ್ದ ಕತ್ತಿಯನ್ನು ಎತ್ತಿಗೊಂಡ ಅಪರಿಚಿತ ಗ್ರಾಹಕ ಅದರಿಂದ ಶಹಜಾದ್ ನ ಹೊಟ್ಟೆಗೆ ಇರಿದಿದ್ದಾನೆ.

ರಕ್ತಸ್ರಾವವಾಗುತ್ತಿದ್ದ ಹೊಟ್ಟೆಯನ್ನು ಹಿಡಿದುಕೊಂಡು ಶಹಜಾದ್ ಸುಮಾರು 40 ಮೀಟರ್ ದೂರ ಹತ್ತಿರದ ಜಂಕ್ಷನ್ ಗೆ ಓಡಿದ್ದು, ಅವನು ಕಲ್ವರ್ಟ್ ಮೇಲೆ ಕುಸಿದು ಬಿದ್ದು ಸಹಾಯಕ್ಕಾಗಿ ಯಾಚಿಸಿದರೂ ಆರಂಭದಲ್ಲಿ ಯಾರೂ ಆತನ ನೆರವಿಗೆ ಬಂದಿಲ್ಲ. ಇಷ್ಟಾದರೂ ಆರೋಪಿ, ಬೆನ್ನಟ್ಟಿ ಬಂದು ಶಹಜಾದ್ ಸಾಯುವವರೆಗೂ ಇನ್ನೂ ಹಲವಾರು ಬಾರಿ ಇರಿದಿದ್ದಾನೆ. ಮತ್ತೆ ಶಾಂತವಾಗಿ ಅಂಗಡಿಗೆ ಹಿಂದಿರುಗಿ, ತಾನು ಖರೀದಿಸಿದ್ದ ಮಾಂಸವನ್ನು ತೆಗೆದುಕೊಂಡು ತೆರಳಿದ್ದಾನೆ.

ಬಳಿಕ ತುರ್ತು ಕರೆಗೆ ಸ್ಪಂದಿಸಿದ ಪೊಲೀಸ್ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ, ಶಹಜಾದ್ ಶವವನ್ನು ಹೊರತೆಗೆದು ಶವಪರೀಕ್ಷೆಗೆ ಕಳುಹಿಸಿದ್ದಾರೆ. ಕೊಲೆಗಾರನ ಕುರಿತು ಯಾವುದೇ ಆರಂಭಿಕ ಸುಳಿವುಗಳಿಲ್ಲದ ಕಾರಣ, ಈ ಪ್ರದೇಶವನ್ನು ಶೋಧಿಸಲು ಮತ್ತು ಹತ್ತಿರದ ಅಂಗಡಿಗಳಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಮೂರು ತಂಡಗಳನ್ನು ರಚಿಸಲಾಗಿತ್ತು.

ಅದೇ ರಾತ್ರಿ, ಬಿಹಾರದ ನಿವಾಸಿ ಅಮರ್ಜೀತ್ ಮಹತೋ ಎಂದು ಗುರುತಿಸಲಾದ ಆರೋಪಿ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿತು. ಶುಕ್ರವಾರ ಮುಂಜಾನೆಯ ಸುಮಾರಿಗೆ, ಸೆಕ್ಟರ್ 117 ರ ಗಡಿಯಲ್ಲಿರುವ ಕಾಡಿನಲ್ಲಿ ಮಹತೋನನ್ನು ಪತ್ತೆಹಚ್ಚಿದ್ದು, ಪೊಲೀಸರು ಒಳಗೆ ಪ್ರವೇಶಿಸಿದಾಗ, ಮಹತೋ ತನ್ನ ಪಿಸ್ತೂಲಿನಿಂದ ಅಧಿಕಾರಿಗಳ ಮೇಲೆ ಗುಂಡು ಹಾರಿಸಿದ್ದಾನೆ. ನಂತರ ನಡೆದ ಗುಂಡಿನ ಚಕಮಕಿಯಲ್ಲಿ, ಮಹತೋ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಶಹಜಾದ್ ಹತ್ಯೆಗೆ ಬಳಸಿದ ಚಾಕು, ಮಹತೋನ ಪಿಸ್ತೂಲ್ ಮತ್ತು ಜೀವಂತ ಗುಂಡುಗಳ ಸಂಗ್ರಹವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೊಲೀಸರ ಪ್ರಕಾರ, ಶಹಜಾದ್ ಮೂರು ಮಕ್ಕಳ ತಂದೆ. ಆತನ ಪತ್ನಿ ಸಲ್ಮಾ ಅಡುಗೆಯವರಾಗಿ ಕೆಲಸ ಮಾಡುತ್ತಾರೆ. ಇತ್ತೀಚೆಗೆ ಚಾಲಕನ ಕೆಲಸ ಕಳೆದುಕೊಂಡಿದ್ದ ಶಹಜಾದ್, ಹೊಸ ಕೆಲಸದ ನಿರೀಕ್ಷೆಯಲ್ಲಿದ್ದಾಗ ಹತ್ಯೆಗೀಡಾಗಿದ್ದಾನೆ.

ಮಾಂಸದ ಅಂಗಡಿಯಲ್ಲಿ ಕಣ್ಗಾವಲು ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದರೂ, ದೃಶ್ಯಾವಳಿಗಳು ದಾಳಿಯ ಇಣುಕುನೋಟಗಳನ್ನು ಮಾತ್ರ ಸೆರೆಹಿಡಿದಿವೆ. ಆರಂಭಿಕ ಇರಿತದ ಗಾಯದ ನಂತರ ಶಹಜಾದ್ ಅಂಗಡಿಯಿಂದ ಓಡುತ್ತಿರುವುದನ್ನು ಇದರಲ್ಲಿ ಕಾಣಬಹುದು. ತನಿಖೆಯ ಭಾಗವಾಗಿ ಪೊಲೀಸರು ಸುತ್ತಮುತ್ತಲಿನ ಅಂಗಡಿಗಳಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆ ನಡೆದ ಕೂಡಲೇ ಮಾಂಸದ ಅಂಗಡಿಯ ಮಾಲೀಕ ಗುಲ್ಜಾರ್ ನಾಪತ್ತೆಯಾಗಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...