ಇಂದೋರ್: ರಸ್ತೆ ಅಪಘಾತದಲ್ಲಿ ತನ್ನ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿದ್ದರಿಂದ ಮನನೊಂದ 28 ವರ್ಷದ ವ್ಯಕ್ತಿಯೊಬ್ಬರು ಮಂಗಳವಾರ ಮಧ್ಯಪ್ರದೇಶದ ಇಂದೋರ್-ಅಹಮದಾಬಾದ್ ಹೆದ್ದಾರಿಯ ನಲ್ಖೇಡಾದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತನನ್ನು ಕಾಂತಿ ಸಿಂಗ್ ಎಂದು ಗುರುತಿಸಲಾಗಿದೆ. ಝಬುವಾ ಜಿಲ್ಲೆಯ ನಿವಾಸಿ ಕಾಂತಿ ಸಿಂಗ್ ಆತ್ಮಹತ್ಯೆಗೆ ಮೊದಲು ವೀಡಿಯೊ ಹೇಳಿಕೆ ರೆಕಾರ್ಡ್ ಮಾಡಿ ಅವರ ಕುಟುಂಬ ಸದಸ್ಯರಿಗೆ ಕಳುಹಿಸಿದ್ದಾರೆ.
ಅಪಘಾತದಲ್ಲಿ ನನ್ನ ಆಪ್ತ ಸ್ನೇಹಿತ ಮೃತಪಟ್ಟಿದ್ದಾನೆ. ನಾನು ಕೂಡ ಸಾಯುತ್ತಿದ್ದೇನೆ. ನನ್ನ ಕುಟುಂಬದ ಸದಸ್ಯರಿಗೆ ತೊಂದರೆ ಕೊಡಬೇಡಿ ಎಂದು ತನ್ನ ಸ್ಥಳೀಯ ಬುಡಕಟ್ಟು ಭಾಷೆ ಜಾಬುವಾದಲ್ಲಿ ವಿಡಿಯೋ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾಂತಿ ಮತ್ತು ಅವರ ಸ್ನೇಹಿತ ನರ್ವೆ ಸಿಂಗ್ ಅವರು ಇತ್ತೀಚೆಗೆ ಮೋಟಾರ್ ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತಕ್ಕೀಡಾಗಿದ್ದರು. ಕಾಂತಿ ಅಪಘಾತದಿಂದ ಬದುಕುಳಿದಿದ್ದರೂ, ಅವರ ಸ್ನೇಹಿತ ಗಾಯಗಳಿಂದ ಸಾವನ್ನಪ್ಪಿದರು.
ಹೆದ್ದಾರಿಯಲ್ಲಿ ಎರಡು ಮೋಟಾರ್ ಸೈಕಲ್ ಗಳು ಡಿಕ್ಕಿ ಹೊಡೆದವು, ಇದರಲ್ಲಿ ನರ್ವೆ ಸಿಂಗ್(29) ಎಂದು ಗುರುತಿಸಲಾದ ವ್ಯಕ್ತಿ ಸಾವನ್ನಪ್ಪಿದರೆ, ಅವನ ಸ್ನೇಹಿತ ಕಾಂತಿ ಬದುಕುಳಿದರು. ಇಬ್ಬರೂ ಸ್ನೇಹಿತರಾಗಿದ್ದರು. ಅವರು ಝಬುವಾ ಜಿಲ್ಲೆಯ ಫುಲ್ದನ್ವಾಡಿಯಲ್ಲಿ ನೆಲೆಸಿದ್ದರು. ಅವರು ಉಜ್ಜಯಿನಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ರಾಜ್‌ಗಢ ಪೊಲೀಸ್ ಠಾಣೆಯ ಉಸ್ತುವಾರಿ ಸಂಜಯ್ ರಾವತ್ ತಿಳಿಸಿದ್ದಾರೆ.
ತನ್ನ ಸ್ನೇಹಿತನ ಸಾವಿನಿಂದ ಕಂಗಾಲಾದ ಕಾಂತಿ ಅಪಘಾತ ಸ್ಥಳದ ಬಳಿಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಪಘಾತದಲ್ಲಿ ಇನ್ನೊಂದು ದ್ವಿಚಕ್ರವಾಹನದಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ರಾವತ್ ತಿಳಿಸಿದರು.