
ಮಹಿಳಾ ನ್ಯಾಯಾಧೀಶರು ಸೇರಿದಂತೆ ದೇಶಾದ್ಯಂತ 50 ಕ್ಕೂ ಹೆಚ್ಚು ಮಹಿಳೆಯರಿಗೆ ಮುಕೀಮ್ ಖಾನ್ ವಂಚಿಸಿದ್ದ. ಉತ್ತರ ಪ್ರದೇಶದ ಪ್ರತಾಪ್‌ಗಢ ನಿವಾಸಿ ಮುಕೀಮ್ ಖಾನ್ (38) ನನ್ನು ದೆಹಲಿ ಪೊಲೀಸ್ ಅಪರಾಧ ವಿಭಾಗವು ಇತ್ತೀಚೆಗೆ ಬಂಧಿಸಿತು.
ನಕಲಿ ಗುರುತುಗಳೊಂದಿಗೆ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ಅನೇಕ ಖಾತೆಗಳನ್ನು ರಚಿಸಿದ್ದ ಆತ ಮಹಿಳೆಯರನ್ನು ತನ್ನ ಸುಳ್ಳಿನ ಜಾಲದಲ್ಲಿ ಸಿಲುಕಿಸುತ್ತಿದ್ದ. ಮದುವೆಯಾಗದ, ವಿಧವೆ ಮತ್ತು ವಿಚ್ಛೇದಿತ ಮುಸ್ಲಿಂ ಮಹಿಳೆಯರನ್ನು ಮದುವೆಗಾಗಿ ಗುರಿಯಾಗಿಸುತ್ತಿದ್ದ. ಆತ ತನ್ನನ್ನು ಸರ್ಕಾರಿ ಅಧಿಕಾರಿ ಎಂದು ಪರಿಚಯಿಸಿಕೊಂಡು ತನ್ನ ಹೆಂಡತಿ ಸತ್ತಿದ್ದಾಳೆ, ತನ್ನ ಮಗಳನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಸುಳ್ಳು ಕಥೆಗಳನ್ನು ಹೇಳಿ ಅವರನ್ನು ಆಕರ್ಷಿಸುತ್ತಿದ್ದ.
ಮದುವೆಯಾಗಿ ಮೂರು ಮಕ್ಕಳನ್ನು ಹೊಂದಿರುವ ಆರೋಪಿ ಮುಕೀಮ್ ಖಾನ್ ಮೋಸ ಹೋದ ಮಹಿಳೆಯರೊಂದಿಗೆ ಪತ್ನಿ ಮತ್ತು ಮಗಳ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದ. ಮಹಿಳೆಯರ ಕುಟುಂಬದವರನ್ನು ಭೇಟಿ ಮಾಡಿ ಮದುವೆಯ ದಿನಾಂಕವನ್ನೂ ನಿಗದಿ ಪಡಿಸುತ್ತಿದ್ದ. ಅವರ ನಂಬಿಕೆಯನ್ನು ಗಳಿಸಿದ ನಂತರ ಮದುವೆ ಹಾಲ್‌ಗಳನ್ನು ಕಾಯ್ದಿರಿಸಲು ಅಥವಾ ಮದುವೆಯ ಇತರ ವೆಚ್ಚಗಳಿಗೆ ಹಣ ಪಡೆದ ನಂತರ ಕಣ್ಮರೆಯಾಗುತ್ತಿದ್ದ.
ವಿಚಾರಣೆ ವೇಳೆ ಆತ ದೇಶಾದ್ಯಂತ 50ಕ್ಕೂ ಹೆಚ್ಚು ಮಹಿಳೆಯರನ್ನು ವಂಚಿಸಿದ್ದನ್ನು ಬಹಿರಂಗಪಡಿಸಿದ್ದಾನೆ. ಇದರಲ್ಲಿ ಉತ್ತರ ಪ್ರದೇಶದ ಮಹಿಳಾ ನ್ಯಾಯಾಧೀಶರೂ ಸೇರಿದ್ದಾರೆ.
ವಂಚನೆ ಆರಂಭವಾಗಿದ್ದೇಗೆ?
ಮುಕೀಮ್ ಖಾನ್ ತಾನು ಮದುವೆಯಾದ 6 ವರ್ಷಗಳ ನಂತರ ತನ್ನ ಮೊದಲ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಅನ್ನು 2020 ರಲ್ಲಿ ತೆರೆದ. ಅಲ್ಲಿ ಅವನು ತನ್ನ ಮೊದಲ ಗುರಿಯನ್ನು ಕಂಡುಕೊಂಡು ಐದು ವರ್ಷದ ಮಗಳೊಂದಿಗೆ ಇದ್ದ ವಡೋದರಾ ಮೂಲದ ವಿಚ್ಛೇದಿತ ಮಹಿಳೆ ತನ್ನ ಮದುವೆಯಾಗಲು ಪ್ರಸ್ತಾಪಿಸಿದ. ಆತ ವಡೋದರಾದಿಂದ ಹೊರಡುವ ಮೊದಲು, ತನ್ನ ವಾಲೆಟ್ ಕಳೆದುಹೋಗಿದೆ ಎಂದು ಸುಳ್ಳು ಕಥೆಯನ್ನು ಹೇಳಿ ಅವಳಿಂದ 30,000 ರೂ. ಪಡೆದು ಹಿಂದಿರುಗಿ ಅವಳೊಂದಿಗೆ ವಾಸಿಸಲು ಪ್ರಾರಂಭಿಸಿದನು. ಈ ಮೂಲಕ ಸುಲಭವಾಗಿ ಹಣವನ್ನು ಗಳಿಸುವ ಕಲ್ಪನೆಯು ಅವನ ಹಣದಾಸೆಯನ್ನು ಹೆಚ್ಚಾಗಿಸಿತು. ನಂತರ 2023 ರಲ್ಲಿ ದೆಹಲಿಯಲ್ಲಿ ಮತ್ತೊಂದು ನಕಲಿ ಕಥೆಯೊಂದಿಗೆ ವಿಧವೆಯನ್ನು ವಿವಾಹವಾದ. ಇದೇ ರೀತಿ ವಿವಿಧ ರಾಜ್ಯಗಳಲ್ಲಿ ಮುಂದುವರೆಯಿತು.
ಆತ ಮಹಿಳೆಯರಿಂದ ಮೊಬೈಲ್ ಫೋನ್‌ಗಳು, ಆಭರಣಗಳು ಮತ್ತು ದ್ವಿಚಕ್ರ ವಾಹನಗಳಂತಹ ದುಬಾರಿ ಉಡುಗೊರೆಗಳನ್ನು ಪಡೆದಿದ್ದ. ನಂತರ ಅವುಗಳನ್ನು ಮಾರಾಟ ಮಾಡಿ ಹಣ ಗಳಿಸಿದ. ಮಹಿಳೆಯರಿಗೆ ಗಿಫ್ಟ್ ಖರೀದಿಸುವ ವೇಳೆ ಅವನು ತನ್ನ ಎಟಿಎಂ ಕಾರ್ಡ್ ಕೆಲಸ ಮಾಡುತ್ತಿಲ್ಲ ಅಥವಾ ಹಣದ ಕೊರತೆ ಇದೆ ಎಂದು ಸುಳ್ಳು ಕಥೆ ಕಟ್ಟುತ್ತಿದ್ದ. ಅಂತಹ ಒಂದು ಘಟನೆಯಲ್ಲಿ ಮಹಿಳೆಯೊಬ್ಬರಿಗೆ ಉಡುಗೊರೆಯಾಗಿ ದ್ವಿಚಕ್ರ ವಾಹನವನ್ನು ಬುಕ್ ಮಾಡಿದ. ಆದರೆ ಕೇವಲ ಟೋಕನ್ ಮೊತ್ತವನ್ನು ಪಾವತಿಸಿ, ತನ್ನ ಬಳಿ ಸದ್ಯಕ್ಕೆ ಹಣದ ಕೊರತೆಯಿದೆ ಎಂದು ಉಳಿದ ಹಣವನ್ನು ಮಹಿಳೆಗೇ ಪಾವತಿಸಲು ಹೇಳಿದ. ಬಳಿಕ ಬೈಕ್ ತೆಗೆದುಕೊಂಡು ತನ್ನ ಮೊದಲ ಸವಾರಿಯಲ್ಲೇ ಪರಾರಿಯಾದ.