ಮಂಡ್ಯ: ತಮ್ಮನ್ನು ಹುಚ್ಚ ಎಂದಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಡಿಸಿಎಂ ಡಿ.ಕೆ. ಶಿವಕುಮಾರ್ ಗೆ ಸಿಎಂ ಕುರ್ಚಿಯ ಹುಚ್ಚು ಹಿಡಿದಿದೆ. ಚನ್ನಪಟ್ಟಣಕ್ಕೆ ಹೋಗಿ ಹುಚ್ಚ ಯಾರೆಂದು ಪ್ರದರ್ಶನ ಮಾಡಿಕೊಳ್ಳುತ್ತಿದ್ದಾರೆ. ನಾನು ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಒಂದಷ್ಟು ದಿನ ದೇವೇಗೌಡರ ಕುಟುಂಬದ ವಿರುದ್ಧ ಆರೋಪ ಕೇಳಿ ಬಂತು. ಯಾರ್ಯಾರಿಗೆ ಎಷ್ಟೆಷ್ಟು ದುಡ್ಡು ಕೊಟ್ಟು ಪ್ರಚಾರ ಮಾಡಿಸಿದ್ದಾರೆ, ದೇವೇಗೌಡರ ಕುಟುಂಬ ಮುಗಿಸಲು ಹೇಗೆ ಹೊರಟಿದ್ದಾರೆಂದು ಗೊತ್ತಿದೆ. ಇದೆಲ್ಲ ಮುಗಿಯಿತು. ಈಗ ಸಿಎಂ ಮೇಲೆ ನಡೆಯುತ್ತಿದೆ ಎಂದು ಹೆಚ್.ಡಿ.ಕೆ. ಹೇಳಿದ್ದಾರೆ.
ಜನರ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸುವ ಬಗ್ಗೆ ವಿಶ್ವಾಸವಿಲ್ಲ. ಮಂಡ್ಯ ನಗರದಲ್ಲಿ ನಿವೇಶನ ನೀಡುವಂತೆ ಸಾಕಷ್ಟು ಒತ್ತಡವಿದೆ. ಕೆಲವು ಕಾರ್ಯಕ್ರಮ ತರಲು ಅವಕಾಶ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು ಕೂಡ ಜನತಾ ದರ್ಶನ ಮಾಡಿದ್ದರು. ಚುನಾವಣೆಗೆ ಮೊದಲ ಜನತಾ ದರ್ಶನದಲ್ಲಿ ಎಷ್ಟು ಪರಿಹಾರ ಸಿಕ್ಕಿದೆ ಎನ್ನುವುದು ಇಂದಿನ ಜನತಾ ದರ್ಶನದ ವೇಳೆ ದರ್ಶನವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಇನ್ಮುಂದೆಯಾದರೂ ಕೆಲಸ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಕಿವಿ ಮಾತು ಹೇಳಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೆಲವು ವಿಚಾರಗಳು ಸುತ್ತಿಕೊಳ್ಳುತ್ತಿವೆ. ಇದಕ್ಕೆ ಕಾಂಗ್ರೆಸ್ ನಾಯಕರೇ ಪ್ರೇರಣೆ ನೀಡುತ್ತಿದ್ದಾರೆ. ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ. ಈ ರೀತಿಯ ಅಧಿಕಾರ ಇನ್ನೆಷ್ಟು ದಿನ ನಡೆಸುತ್ತೀರಿ? ಜನ ಅಧಿಕಾರ ಕೊಟ್ಟಿದ್ದಾರೆ. ತಿರುಗಿ ಬೀಳುವ ಮೊದಲು ಎಚ್ಚರವಹಿಸಿ ಎಂದು ಹೇಳಿದ್ದಾರೆ.