ಬೆಂಗಳೂರು : ರಾಜ್ಯದ ಹೆಣ್ಣು ಮಕ್ಕಳ ಬಗ್ಗೆ ಕುಮಾರಸ್ವಾಮಿ ನೀಡಿರುವ ಹೇಳಿಕೆಯು ಅಕ್ಷಮ್ಯ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಾಗ್ಧಾಳಿ ನಡೆಸಿದ್ದಾರೆ.
ಮಡಿಕೇರಿಯಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ -2 ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಯಾವುದೇ ಒಂದು ಊರಿಗೆ ಹೋಗಬೇಕಾದರೆ ಅಲ್ಲಿನ ಗ್ರಾಮ ದೇವತೆಗೆ ಕೈ ಮುಗಿದು ಮುಂದೆ ಹೋಗುತ್ತೇವೆ. ನಮಗೆಲ್ಲಾ ನೀರು ನೀಡುತ್ತಿರುವ ಕಾವೇರಿ ತಾಯಿಯ ತವರು ನೆಲವಿದು. ತಾಯಿಗಿಂತ ದೇವರಿಲ್ಲ ಎನ್ನುತ್ತಾರೆ. ಕನ್ನಡ ನಾಡಿನಲ್ಲಿ ಹೆಣ್ಣಿಗೆ ವಿಶೇಷ ಸ್ಥಾನವಿದೆ. ಅವರ ಬದುಕು ಕಟ್ಟುವ ನಿಟ್ಟಿನಲ್ಲಿ ನಾವು ಐದು ಗ್ಯಾರಂಟಿಗಳನ್ನು ನೀಡಿದರೆ, ಎಚ್.ಡಿ ಕುಮಾರಸ್ವಾಮಿ ಅವರು ಗ್ಯಾರಂಟಿಗಳಿಂದ ಹಳ್ಳಿ ಹೆಣ್ಣುಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ. ನನಗೆ ಈ ವಿಷಯ ಅರಗಿಸಿಕೊಳ್ಳಲೂ ಕಷ್ಟವಾಗುತ್ತಿದೆ.
ಮಾಜಿ ಪ್ರಧಾನಿಯವರ ಪುತ್ರ, ಮಾಜಿ ಮುಖ್ಯಮಂತ್ರಿಯಾಗಿದ್ದವರಿಂದ ಈ ರೀತಿಯ ಹೇಳಿಕೆ ನಿರೀಕ್ಷಿಸಿರಲಿಲ್ಲ. 1.2 ಕೋಟಿ ಹೆಣ್ಣುಮಕ್ಕಳು ಗೃಹಲಕ್ಷ್ಮಿ ಯೋಜನೆಗೆ ನೋಂದಣಿಯಾಗಿದ್ದಾರೆ. ಕೋಟ್ಯಂತರ ಹೆಣ್ಣುಮಕ್ಕಳು ಉಚಿತವಾಗಿ ಬಸ್ನಲ್ಲಿ ಓಡಾಡುತ್ತಿದ್ದಾರೆ. ಅನ್ನ ಭಾಗ್ಯ ಮೂಲಕ ಬಡ ಕುಟುಂಬಗಳ ಹಸಿವು ನೀಗಿಸಿದ್ದೇವೆ. ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ನೀಡುತ್ತಿರುವ ಗ್ಯಾರಂಟಿಗಳ ಬಗ್ಗೆ, ರಾಜ್ಯದ ಹೆಣ್ಣು ಮಕ್ಕಳ ಬಗ್ಗೆ ಕುಮಾರ ಸ್ವಾಮಿ ಅವರು ನೀಡಿರುವ ಹೇಳಿಕೆಯು ಅಕ್ಷಮ್ಯ ಎಂದು ಹೇಳಿದರು.