ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ವಿಚಾರವಾಗಿ ದೆಹಲಿಯಲ್ಲಿ ಚರ್ಚೆ ನಡೆಸಲಾಗಿದೆ. ಅಭ್ಯರ್ಥಿ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಚ್ 22ರವರೆಗೂ ಬಿಜೆಪಿ ಟಿಕೆಟ್ ಫೈನಲ್ ಆಗಲ್ಲವೆಂದು ವಿಜಯೇಂದ್ರ ಅವರು ಸಹ ಹೇಳಿದ್ದಾರೆ. ಪ್ರಧಾನಿ ಮತ್ತು ಗೃಹ ಸಚಿವರು, ಬಿಜೆಪಿ ಅಧ್ಯಕ್ಷರು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
ನಾನು ರಾಜಕೀಯ ಮಾಡುವುದಾದರೆ ಮಂಡ್ಯದಿಂದಲೇ ಎಂದು ಹೇಳಿದ್ದೆ. ಈಗಲೂ ಅದೇ ಮಾತನ್ನೇ ಹೇಳುತ್ತಿದ್ದೇನೆ. ಪ್ರಧಾನಿ ಮೋದಿ ಅವರೇ ನನ್ನನ್ನು ಕರೆಸಿ ಮಾತನಾಡಿ ಎಂದು ಹೇಳಿದ್ದರಿಂದ ಜೆ.ಪಿ. ನಡ್ಡಾ ಅವರು ಕರೆಸಿರುವುದಾಗಿ ತಿಳಿಸಿದ್ದಾರೆ. ಪಕ್ಷದಲ್ಲಿ ನನ್ನ ಬಗ್ಗೆ ತುಂಬಾ ಗೌರವವಿದ್ದು, ಪಕ್ಷದಲ್ಲಿ ಇರಬೇಕು ಎಂದು ಹೇಳಿದ್ದಾರೆ. ಪಾಸಿಟಿವ್ ಆಗಿ ರಿಸಲ್ಟ್ ಬರುವ ವಿಶ್ವಾಸವಿದೆ. ಬಿಜೆಪಿ ವರಿಷ್ಠರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡೋಣ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.
ನಾನು ರಾಜಕೀಯ ಮಾಡುವುದಿದ್ದರೆ ಮಂಡ್ಯದಿಂದ ಮಾತ್ರ ಎಂದು ಹೇಳಿದ್ದೇನೆ. ಬೇರೆಯವರು ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ ಎಂದು ಹೇಳುತ್ತಿದ್ದಾರೆ. ಮಂಡ್ಯ ಟಿಕೆಟ್ ವಿಚಾರದಲ್ಲಿ ಪಾಸಿಟಿವ್ ರಿಸಲ್ಟ್ ಬರುತ್ತದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಇನ್ನೂ ಅಂತಿಮಗೊಳಿಸಿಲ್ಲ ಎಂದು ಹೇಳುವ ಮೂಲಕ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿಯವರ ತಲೆಬಿಸಿ ಹೆಚ್ಚಿಸಿದ್ದಾರೆ.