ನಾನು ಸುಮ್ಮನೇ ಇದ್ದರೂ ಕುಮಾರಸ್ವಾಮಿ ಕಾಲು ಕೆರೆದು ಜಗಳಕ್ಕೆ ಬರ್ತಾನೆ. ನಾನಿನ್ನು ಹೆಚ್.ಡಿ.ಕೆ. ಮಾತನ್ನು ನೆಗ್ಲೆಕ್ಟ್ ಮಾಡುತ್ತೇನೆ ಎಂದು ಕೆಲ ದಿನಗಳ ಹಿಂದಷ್ಟೇ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು.
ಆದರೆ ಇದಾದ ಬಳಿಕವೂ ಸುಮ್ಮನಾಗದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಮೈಸೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡುವಲ್ಲಿ ಸಿದ್ದರಾಮಯ್ಯ ಪಾತ್ರ ಏನಿತ್ತು ಎಂಬುದು ನನಗೆ ತಿಳಿದಿದೆ. ಕಾಂಗ್ರೆಸ್ನ 23 ಮಂತ್ರಿಗಳನ್ನು ಮನೆಗೆ ಕಳುಹಿಸಿ ಅವರ ಹೊಟ್ಟೆಯ ಮೇಲೆ ಹೊಡೆದಿದ್ದರು. ವಿರೋಧ ಪಕ್ಷ ನಾಯಕನ ಸ್ಥಾನವನ್ನು ಪಡೆಯಲಿಕ್ಕೋಸ್ಕರ ಸಮ್ಮಿಶ್ರ ಸರ್ಕಾರವನ್ನು ಕೆಡವಿದ ಸಿದ್ದರಾಮಯ್ಯರಿಗೆ ನಾಚಿಕೆ ಆಗಬೇಕು ಎಂದು ಜರಿದಿದ್ದಾರೆ.
ಬಿಜೆಪಿ, ಜೆಡಿಎಸ್ನವರು ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡೋದು ಕಾಂಗ್ರೆಸ್ನ್ನು ಉರಿಸೋಕೆ ಎಂದು ಸಿದ್ದರಾಮಯ್ಯ ಹೇಳ್ತಾರೆ. ಆದರೆ ಇಂದು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ ಅಂದರೆ ಅದಕ್ಕೆ ಸಿದ್ದರಾಮಯ್ಯರೇ ಕಾರಣ. ಅಲ್ಪಸಂಖ್ಯಾತರು ಇದನ್ನೆಲ್ಲ ಅರ್ಥ ಮಾಡಿಕೊಳ್ತಾರೆ. ನೀವು ಅಲ್ಪಸಂಖ್ಯಾತರನ್ನು ಗುತ್ತಿಗೆ ತೆಗೆದುಕೊಂಡವರಂತೆ ಆಡುವುದನ್ನು ನಿಲ್ಲಿಸಿ ಎಂದು ಹೇಳಿದ್ದಾರೆ.