ಹಾಸನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಧಮ್, ತಾಕತ್ ಪದಗಳನ್ನು ಸಿಎಂ ಬಳಸಿದ್ದಾರೆ. ಅತಿವೃಷ್ಟಿಯಿಂದ 22 ಜಿಲ್ಲೆಗಳಲ್ಲಿ ಅಪಾರ ಹಾನಿಯಾಗಿದೆ. ಹಾನಿಯಾದ ಪ್ರದೇಶಕ್ಕೆ ಸಚಿವರು ಭೇಟಿ ನೀಡಿ ಧೈರ್ಯ ತುಂಬಲಿಲ್ಲ. ಪರಿಹಾರ ಕಲ್ಪಿಸುವುದರಲ್ಲಿ ಮುಖ್ಯಮಂತ್ರಿಗಳು ತಾಕತ್ ತೋರಿಸಬೇಕು ಎಂದು ಹೇಳಿದ್ದಾರೆ.
ಕೋಟ್ಯಂತರ ರೂಪಾಯಿ ಹಣ ವ್ಯಯ ಮಾಡಿ ಜನಸ್ಪಂದನ ಸಮಾವೇಶ ಮಾಡಿದ್ದರು. ಜವಾಬ್ದಾರಿಯುತ ಸಚಿವರು ವೇದಿಕೆಯಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಒಂದೆಡೆ ಜನರು ಮನೆ, ಬೆಳೆ ಕಳೆದುಕೊಂಡು ಬೀದಿಯಲ್ಲಿ ಬಿದ್ದಿದ್ದಾರೆ. ಮಳೆಯಿಂದ ಹಾನಿಗೊಳಗಾದವರಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ. ಇಂತಹ ಸಂದರ್ಭದಲ್ಲಿ ಧಮ್, ತಾಕತ್ ಸವಾಲಿನ ಬಗ್ಗೆ ಮಾತನಾಡುವುದು ಸಮಂಜಸವಲ್ಲ ಎಂದು ಹೇಳಿದ್ದಾರೆ.
ಅದ್ಯಾರೋ ಸಚಿವ ಗಾಳಿಯಲ್ಲಿ ಗುಂಡು ಹೊಡೆಯುತ್ತಾರೆ ಎಂದು ಹೇಳಿದ್ದಾರೆ. ಸದನದಲ್ಲಿ ಒಂದು ವಿಷಯವನ್ನು ದಾಖಲೆಯ ಸಮೇತ ಮಾತನಾಡುತ್ತೇನೆ. ಒಬ್ಬ ಸಚಿವ ಎಲ್ಲಾ ಫೈಲ್ ಗಳನ್ನು ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಇನ್ನೆರಡು ದಿನದಲ್ಲಿ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ. ಕುಮಾರಸ್ವಾಮಿ ಗಾಳಿಯಲ್ಲಿ ಗುಂಡು ಹಾರಿಸುತ್ತಾನೋ ನಿಜವಾದ ಗುಂಡು ಹಾರಿಸುತ್ತಾನೋ ಎಂದು ಸದನದಲ್ಲಿ ಗೊತ್ತಾಗುತ್ತದೆ ಎಂದು ಹಾಸನದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.