
ಬೆಂಗಳೂರು: ರಾಜ್ಯಪಾಲರ ಭಾಷಣದಲ್ಲಿ ಉಪ್ಪು ಹುಳಿ ಖಾರ ಏನೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಹೆಚ್.ಡಿ.ಕುಮಾರಸ್ವಾಮಿ, ಒಂದು ಕಡೆ ಬರಗಾಲ, ಕೇಂದ್ರ ಸರ್ಕಾರದಿಂದ ಹಣ ಬರುತ್ತಿಲ್ಲ ಎನ್ನುವ ಸರ್ಕಾರ ಇಲ್ಲಿ ನೋಡಿದರೆ ಗಂಜಿ ಕೇಂದ್ರಗಳನ್ನು ಸೃಷ್ಟಿ ಮಾಡಿ 90 ಮಂದಿಗೆ ಸಂಪುಟ ದರ್ಜೆ ನೀಡಿದೆ. ಅದರಲ್ಲಿ 77 ಶಾಸಕರಿಗೆ ಸಂಪುಟ ದರ್ಜೆ ಭಾಗ್ಯ ನೀಡಿದ್ದರೆ, ಸಿಎಂ ಕಚೇರಿಯಲ್ಲಿ 9 ಜನರಿಗೆ ಸಂಪುಟ ಭಾಗ್ಯ ಕರುಣಿಸಲಾಗಿದೆ. ರಾಜ್ಯದ ಆಡಳಿತಾತ್ಮಕ ಇತಿಹಾಸದಲ್ಲಿಯೇ ಇಷ್ಟು ಬೇಕಾಬಿಟ್ಟಿಯಾಗಿ ಅಧಿಕಾರ ಹಂಚಿಕೆ ಮಾಡಿ ಖಜಾನೆಗೆ ನಷ್ಟ ಉಂಟು ಮಾಡಿದ್ದು ನೋಡಿರಲಿಲ್ಲ ಎಂದು ಕಿಡಿಕಾರಿದ್ದಾರೆ.
ಕ್ಯಾಬಿನೆಟ್ ದರ್ಜೆ ಅದಕ್ಕೊಂದು ಲೆಕ್ಕ ಬೇಡವೇ? ಉಪ ಮುಖ್ಯಮಂತ್ರಿ ಅವರ ಆರೋಗ್ಯ ತಪಾಸಣೆ ಮಾಡುವ ವೈದ್ಯರಿಗೂ ಕ್ಯಾಬಿನೆಟ್ ದರ್ಜೆ. ಕಲೆಕ್ಷನ್ ಮಾಡಿಕೊಡುವ ಆಸಾಮಿಗೂ ಕ್ಯಾಬಿನೆಟ್ ದರ್ಜೆ. ಕರ್ನಾಟಕ ಹಣಕಾಸು ಸಂಸ್ಥೆ ಅಧ್ಯಕ್ಷರನ್ನಾಗಿ ಶಾಸಕರನ್ನು ನೇಮಕ ಮಾಡುತ್ತಿರುವುದು ಉಂಟಾ? ಬರದಿಂದ ತತ್ತರಿಸಿರುವ ರೈತರಿಗೆ ಪರಿಹಾರ ಕೊಡಲು ಇವರಲ್ಲಿ ಹಣವಿಲ್ಲ. ಆದರೆ, ಸಂಪುಟ ದರ್ಜೆ ಭಾಗ್ಯಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಇದನ್ನು ಏನೆಂದು ಕರೆಯಬೇಕು? ಎಂದು ಪ್ರಶ್ನಿಸಿದ್ದಾರೆ.
ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಪ್ರತೀ ವರ್ಷ ನಡೆಯುವ ಶಾಸ್ತ್ರವಷ್ಟೇ. ಪ್ರತಿ ವರ್ಷದ ಸಂಪ್ರದಾಯದಂತೆ ವಿಧಾನಸಭೆ ಕಲಾಪಗಳು ನಡೆಯುತ್ತವೆ. ಸರಕಾರದ ಮುಂದಿನ ವರ್ಷದ ನೀಲನಕ್ಷೆ ಹಾಗೂ ಸಾಧನೆಗಳ ನೋಟವನ್ನು ಕೊಡಬೇಕು. ಅದನ್ನು ಮಾಡದ ಕೆಲಸಗಳ ಬಗ್ಗೆ ಡಂಗುರ ಹೊಡೆಯುವ ಕೆಲಸ ಅಷ್ಟೇ ಆಯಿತು. ಸರ್ಕಾರದ ಸಾಧನೆಗಳ ಬಗ್ಗೆ ರಾಜ್ಯಪಾಲರಿಂದ ಭಾಷಣ ಕೇಳಿದ್ದೇವೆ. ಆದರೆ, ಈ ಭಾಷಣ ಹಾಡಿದ್ದೇ ಹಾಡೋ ಕಿಸಬಾಯಿ ದಾಸ ಎನ್ನುವ ರೀತಿಯಲ್ಲಿದೆ ಎಂದು ಅವರು ಟೀಕಿಸಿದರು. ಇವರಿಗೆ ಸ್ಪಷ್ಟ ಬಹುಮಯದ ಸರಕಾರ ಕೊಟ್ಟಿದ್ದಾರೆ ಜನ. ಆದರೆ, ಇವರು ಅಸ್ಪಷ್ಟವಾಗಿ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.