ರಾಮನಗರ: ನಾನು ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಬಾರದೆಂದಿದ್ದೆ. ಆದರೆ, ಅನಿವಾರ್ಯವಾಗಿ ಸ್ಪರ್ಧಿಸಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಆಗಿದ್ದಾಗ 25,000 ಕೋಟಿ ರೂ. ಸಾಲ ಮನ್ನಾ ಮಾಡಿದ್ದೇನೆ. ಚನ್ನಪಟ್ಟಣವನ್ನು ನಾನು ಬದುಕಿರುವವರೆಗೂ ಮರೆಯುವುದಿಲ್ಲ. ಈಗಾಗಲೇ ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಕೇಂದ್ರ ಮಂತ್ರಿ ಆಗಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಕೆಲಸ ಮಾಡುತ್ತಾನೆ ಎಂದು ಜನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕುಮಾರಣ್ಣ ಕೃಷಿ ಮಂತ್ರಿ ಆಗುತ್ತಾರೆ ಎಂದು ಆಸೆ ಇಟ್ಟುಕೊಂಡಿದ್ದೀರಿ. ಜನರ ನಿರೀಕ್ಷೆ ನೋಡಿ ಭಯ ಆಗುತ್ತೆ ಎಂದು ಹೇಳಿದ್ದಾರೆ.
ಸಚಿವರು ಯಾವತ್ತಾದರೂ ನಿಮ್ಮ ಸಮಸ್ಯೆ ಏನು ಅಂತ ಬಂದಿದ್ರಾ? ಈಗ ದೇವಸ್ಥಾನ ಸುತ್ತಿ ಏನು ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ನಾನು ಯಾವತ್ತೂ ಕೆಡಿಪಿ ಸಭೆ ಮಾಡಿಲ್ಲ. ಮೊನ್ನೆ ಸಭೆ ಮಾಡಿದ್ದಾರೆ. ಎಲ್ಲರನ್ನೂ ಒಳಗೆ ಕರೆಸಿಕೊಂಡು ನಾನು ಸಭೆ ಮಾಡಿದ್ದೆ. ಮೊನ್ನೆಯ ಸಭೆಯಲ್ಲಿ ಅಧಿಕಾರಿಗಳ ಮೊಬೈಲ್ ಕೂಡ ಬಿಟ್ಟಿಲ್ಲವಂತೆ ಎಂದು ಹೇಳಿದ್ದಾರೆ.
ದೇಶದ ದೃಷ್ಟಿಯಿಂದ ನಾನು ಸಿ.ಪಿ. ಯೋಗೇಶ್ವರ್ ಒಂದಾಗಿದ್ದೇವೆ. ರಾಮನಗರ ಅಭಿವೃದ್ಧಿ ಮಾಡಿದ್ದು ನಾನು, ದೇವೇಗೌಡರು ಎಂದು ಡಿಕೆ ಬ್ರದರ್ಸ್ ವಿರುದ್ಧ ಕಿಡಿ ಕಾರಿದ ಕುಮಾರಸ್ವಾಮಿ, ಅಂತರರಾಷ್ಟ್ರೀಯ ಮಟ್ಟದ ರೇಷ್ಮೆ ಮಾರುಕಟ್ಟೆ ಮಾಡಿಸಿದೆ. ರಾಜೀವ್ ಗಾಂಧಿ ಆಸ್ಪತ್ರೆ ತರಲು ಪ್ರಯತ್ನಿಸಿದೆ. ಟೊಯೋಟಾ ಫ್ಯಾಕ್ಟರಿ ಮಾಡಿದ್ದು ನಾನು ದೇವೇಗೌಡರು. ಇವರು ಅಲ್ಲಿ ಕಲ್ಲು ಹೊಡೆದುಕೊಂಡು ಕೂತಿರುವ ಗಿರಾಕಿಗಳು. ಅವರು ಯಾವ ಮಟ್ಟಕ್ಕೆ ದುಡ್ಡು ಖರ್ಚು ಮಾಡಬೇಕೋ ಮಾಡ್ತಾರೆ, ಇವತ್ತು ನಿದ್ದೆಗೆಟ್ಟಿದ್ದಾರೆ. ಇಂತಹ 10 ಜನ ಹುಟ್ಟಿ ಬಂದರೂ ಏನು ಮಾಡೋಕೆ ಆಗಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.