ಬೆಂಗಳೂರು: ವರ್ಗಾವಣೆ ದಂಧೆಯ ರೇಟ್ ಕಾರ್ಡ್ ಬಿಡುಗಡೆ ಮಾಡಿ ಸರ್ಕಾರಕ್ಕೆ ಮುಜುಗರ ತಂದಿಟ್ಟಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದು ಮತ್ತೊಂದು ಬಾಂಬ್ ಸಿಡಿಸುವ ಸಾಧ್ಯತೆ ಇದೆ.
ಯುರೋಪ್ ಪ್ರವಾಸ ಮುಗಿಸಿ ಬಂದ ಬೆನ್ನಲ್ಲೇ ಕುಮಾರಸ್ವಾಮಿ ಕಮಿಷನ್ ಬಾಂಬ್ ಸಿಡಿಸಿದ್ದರು. ಪೋಲಿಸ್ ಇನ್ಸ್ಪೆಕ್ಟರ್ ಗಳ ವರ್ಗಾವಣೆಯಲ್ಲಿ ವೈಎಸ್‌ಟಿ ಟ್ಯಾಕ್ಸ್ ದಂಧೆಯವರು ಶಾಮೀಲಾಗಿದ್ದಾರೆ. ಬಿಡಿಎನಲ್ಲಿ 250 ಕೋಟಿ ರೂ. ಕಮಿಷನ್ ಸಂಗ್ರಹಕ್ಕೆ ಟಾರ್ಗೆಟ್ ಫಿಕ್ಸ್ ಮಾಡಲಾಗಿದೆ ಎಂದು ವಿದೇಶ ಪ್ರವಾಸದಿಂದ ಮರಳುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿಯೇ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದರು.
ಕಾಂಗ್ರೆಸ್ ಸರ್ಕಾರ ಈಸ್ಟ್ ಇಂಡಿಯಾ ಕಂಪನಿಯಂತೆ ರಾಜ್ಯವನ್ನು ಲೂಟಿ ಮಾಡುತ್ತಿದೆ ಎಂದು ಟೀಕಿಸಿದ್ದರು. ಇಂದು ಮಧ್ಯಾಹ್ನ 12 ಗಂಟೆಗೆ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಪೊಲೀಸ್ ವರ್ಗಾವಣೆ, ಗುತ್ತಿಗೆದಾರರ ಕಮಿಷನ್ ಆರೋಪ, ವೈಎಸ್‌ಟಿ ಟ್ಯಾಕ್ಸ್ ಬಗ್ಗೆ ದಾಖಲೆ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು ಅವರ ಪತ್ರಿಕಾಗೋಷ್ಠಿ ಕುರಿತಾಗಿ ಭಾರಿ ಕುತೂಹಲ ಮೂಡಿದೆ.