ಬೆಂಗಳೂರು: ಗಂಗೇನಹಳ್ಳಿ ಡಿ ನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಲೋಕಾಯುಕ್ತ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.
ಸುಮಾರು ಒಂದೂವರೆ ಗಂಟೆ ಕಾಲ ಅವರು ವಿಚಾರಣೆ ಎದುರಿಸಿದ್ದಾರೆ. ಲೋಕಾಯುಕ್ತ ವಿಚಾರಣೆಯ ಬಳಿಕ ಮಾತನಾಡಿದ ಅವರು, ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಮೊದಲೇ ಹೇಳಿದ್ದೆ. ಈ ಪ್ರಕರಣದಲ್ಲಿ ನನಗೆ ಯಾವುದೇ ಗಂಡಾಂತರ ಬರುವುದಿಲ್ಲ ಎಂದು ಹೇಳಿದ್ದಾರೆ.
2015ರಲ್ಲಿ ಸರ್ಕಾರದ ಹಲವು ಪ್ರಕರಣಗಳನ್ನು ಪ್ರಸ್ತಾಪಿಸಿದ್ದೆ. ಹೀಗಾಗಿ ನನ್ನ ವಿರುದ್ಧ 2015ರಲ್ಲಿ ಕೇಸ್ ಹಾಕಿಸಿದ್ದರು. ಲೋಕಾಯುಕ್ತ ಅಧಿಕಾರಿಗಳು ನನ್ನನ್ನು ಕರೆದಿದ್ದರು. ಹಾಗಾಗಿ ಬಂದಿದ್ದೇನೆ. ಲೋಕಾಯುಕ್ತ ಕಚೇರಿಗೆ ನಾನು ತಪ್ಪು ಮಾಡಿ ಬಂದಿಲ್ಲ ಎಂದು ಹೇಳಿದ್ದಾರೆ.
ನನ್ನ ವಿರುದ್ಧ ನಾಲ್ವರು ಸಚಿವರು ಆರೋಪ ಮಾಡಿದ್ದಾರೆ. ನನ್ನ ಬಗ್ಗೆ ಹೇಳಿಕೆ ನೀಡಿದ ಮಹಾನುಭಾವರು ನನ್ನನ್ನು ಮುಖ್ಯಮಂತ್ರಿ ಮಾಡಿದ್ದರು. ಯಾವ ಮುಖ ಇಟ್ಟುಕೊಂಡು ನನ್ನನ್ನು ಮುಖ್ಯಮಂತ್ರಿ ಮಾಡಿದ್ದರು? ಅವತ್ತು ಯಾಕೆ ನನ್ನ ಮಂತ್ರಿ ಮಂಡಲಕ್ಕೆ ಇವರು ಸೇರಿದ್ದರು ಎಂದು ಪ್ರಶ್ನಿಸಿದ್ದಾರೆ.
ನಾನು ಯಾರಿಗೂ ಹೆದರುವುದಿಲ್ಲ ಎಂದು ಸಿಎಂ ಹೇಳಿದ್ದಾರೆ. ನನ್ನ ಯೋಜನೆ ಸಹಿಸದೆ ಹೀಗೆ ಮಾಡ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ನಾನೇನು ಮಾಡಿದ್ದೇನೆ? ನಾನ್ಯಾಕೆ ರಾಜೀನಾಮೆ ಕೊಡಲಿ. ಭಂಡತನದಲ್ಲಿ ಆಸ್ತಿ ಲೂಟಿ ಮಾಡಿದ್ದು ನೀವು. ನಾನೇಕೆ ರಾಜೀನಾಮೆ ಕೊಡಲಿ? ಪಾರದರ್ಶಕ ಆಡಳಿತವಾ ನಿಮ್ಮದು ಎಂದು ವಾಗ್ದಾಳಿ ನಡೆಸಿದ್ದಾರೆ.