ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಜಯನಗರ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕುಮಾರಸ್ವಾಮಿಯವರಿಗೆ ಮಧ್ಯರಾತ್ರಿ ಬಲಭಾಗದಲ್ಲಿ ಮೈಲ್ಡ್ ಸ್ಟ್ರೋಕ್ ಆಗಿತ್ತು. ಎಡ ಭಾಗದಲ್ಲಿ ರಕ್ತನಾಳ ಸಮಸ್ಯೆಯಾಗಿತ್ತು. ಈ ರೀತಿ ಕಾಯಿಲೆಯಿಂದ ರಕ್ಷಣೆ ಮಾಡುವುದು ಬಹಳ ಮುಖ್ಯ. ಸ್ಟ್ರೋಕ್ ಆದ 3 ಗಂಟೆಯೊಳಗೆ ಆಸ್ಪತ್ರೆಗೆ ಬಂದರೆ ಗುಣಪಡಿಸಬಹುದು. ದೊಡ್ಡ ಆಸ್ಪತ್ರೆಗೆ ಬಂದರೆ ಸ್ಟ್ರೋಕ್ ನಿಂದ ಗುಣಮುಖ ಮಾಡಬಹುದು. ಕುಮಾರಸ್ವಾಮಿ ತಕ್ಷಣ ಆಸ್ಪತ್ರೆಗೆ ಬಂದಿದ್ದರಿಂದ ಸೂಕ್ತ ಚಿಕಿತ್ಸೆ ನೀಡಿದ್ದೇವೆ ಎಂದು ಜಯನಗರ ಅಪೋಲೋ ಆಸ್ಪತ್ರೆಯ ವೈದ್ಯ ಸತೀಶ್ ಹೇಳಿದ್ದಾರೆ.
ಕುಮಾರಸ್ವಾಮಿ ಅವರು ಬೆಳಗ್ಗೆ 3 ಗಂಟೆ ಸುಮಾರಿಗೆ ಆಸ್ಪತ್ರೆಗೆ ಬಂದಿದ್ದರು. ಕುಮಾರಸ್ವಾಮಿ ಅವರ ಮಾತಿನಲ್ಲಿ ತೊದಲು, ಕೈಯಲ್ಲಿ ವೀಕ್ನೆಸ್ ಇತ್ತು. ಅವರನ್ನು ವಿಂಡೋ ಪೀರಿಯಡ್ ಅವಧಿಯಲ್ಲಿ ಆಸ್ಪತ್ರೆಗೆ ಕರೆತಂದಿದ್ದಾರೆ. ಕೂಡಲೇ ಎಂಆರ್ಐ ಸ್ಕ್ಯಾನ್ ಮಾಡಿ ಸೂಕ್ತ ಚಿಕಿತ್ಸೆ ನೀಡಿದ್ದೇವೆ. ತಕ್ಷಣವೇ ಚಿಕಿತ್ಸೆ ನೀಡಿದ್ದರಿಂದ ಕುಮಾರಸ್ವಾಮಿ ಗುಣಮುಖರಾಗಿದ್ದಾರೆ. ಒಂದು ಗಂಟೆಯಲ್ಲಿ ಚೇತರಿಸಿಕೊಂಡಿದ್ದಾರೆ. ಮಾತು ಎಲ್ಲಾ ಸರಿಯಾಗಿದೆ. ಎಲ್ಲರ ಜೊತೆ ಮಾತನಾಡುತ್ತಿದ್ದಾರೆ. ಹಾರ್ಟ್ ಸೇರಿದಂತೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ.
ಕುಮಾರಸ್ವಾಮಿಯವರಿಗೆ ರಕ್ತ ಚಲನೆ ಕಡಿಮೆಯಾಗಿ ವೀಕ್ನೆಸ್ ಆಗಿತ್ತು. ಇವತ್ತು ನೋಡಿ ನಾಳೆ ಅವರನ್ನು ವಾರ್ಡ್ ಗೆ ಶಿಫ್ಟ್ ಮಾಡುತ್ತೇವೆ. ಮುಂದೆ ಯಾವುದೇ ತೊಂದರೆ ಇಲ್ಲ. ರೆಸ್ಟ್ ಏನೂ ಬೇಕಾಗಿಲ್ಲ. ಎರಡು ಮೂರು ದಿನಗಳ ಬಳಿಕ ಅವರು ಕೆಲಸ ಮಾಡಬಹುದು ಎಂದು ಜಯನಗರ ಅಪೋಲೋ ಆಸ್ಪತ್ರೆಯ ಡಾ. ಸತೀಶ್ ಹೇಳಿದ್ದಾರೆ.
ವದಂತಿ ಹಬ್ಬಿಸಬೇಡಿ:
ಇತ್ತೀಚೆಗೆ ಐಲ್ಯಾಂಡ್ ಗೆ ಹೋಗಿ ಬಂದ ಮೇಲೆ ಕಫಾ ಆಗಿತ್ತು. ಹಾಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಪೋಲೋ ಆಸ್ಪತ್ರೆ ಬಳಿ ಕುಮಾರಸ್ವಾಮಿ ಪತ್ನಿ ಅನಿತಾಕುಮಾರಸ್ವಾಮಿ ಹೇಳಿದ್ದಾರೆ.
ಮೈಕೈ ನೋವು, ತುಂಬಾ ಜ್ವರ ಇದ್ದುದರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಕುಮಾರಸ್ವಾಮಿ ನಿಮ್ಮ ಮುಂದೆ ಬರುತ್ತಾರೆ. ಅವರ ಆರೋಗ್ಯದ ವಿಚಾರವಾಗಿ ಸುಳ್ಳು ಸುದ್ದಿ ಹಬ್ಬಿಸಬೇಡಿ. ನಾಳೆಯೇ ಮನೆಗೆ ಕರೆದುಕೊಂಡು ಹೋಗಬಹುದು ಎಂದು ವೈದ್ಯರು ಹೇಳಿದ್ದಾರೆ. ಕುಮಾರಸ್ವಾಮಿಯವರು ಮನೆಗೆ ಹೋದರೆ ಗೊತ್ತಲ್ಲ ನಿಮಗೆ. ಹಾಗಾಗಿ ಶುಕ್ರವಾರದವರೆಗೆ ಆಸ್ಪತ್ರೆಯಲ್ಲಿ ಇರಲಿದ್ದು, ಶುಕ್ರವಾರ ಬೆಳಗ್ಗೆ ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಅನಿತಾ ಕುಮಾರಸ್ವಾಮಿ ತಿಳಿಸಿದ್ದಾರೆ.
ಬಿ.ಎಸ್.ವೈ. ಕರೆ:
ಮಾಜಿ ಸಿಎಂ ಕುಮಾರಸ್ವಾಮಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಫೋನ್ ಮಾಡಿ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಅವರ ಕುಟುಂಬದವರು ಮತ್ತು ಆಪ್ತರಿಗೆ ಕರೆ ಮಾಡಿ ಹೆಚ್.ಡಿ.ಕೆ. ಆರೋಗ್ಯದ ಬಗ್ಗೆ ಮಾಹಿತಿ ಪಡೆದ ಯಡಿಯೂರಪ್ಪ ಶೀಘ್ರ ಗುಣಮುಖರಾಗಲೆಂದು ಹಾರೈಸಿದ್ದಾರೆ.