ಮಂಡ್ಯ: ರಾಜ್ಯದ ಗಮನ ಕಳೆದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಎದುರು ಹೆಚ್.ಡಿ. ರೇವಣ್ಣ ನಾಮಪತ್ರ ಸಲ್ಲಿಸಿದ್ದಾರೆ.
ಅಂದ ಹಾಗೆ, ಈ ಹೆಚ್.ಡಿ. ರೇವಣ್ಣ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಸಹೋದರನಲ್ಲ, ಆದರೆ ಹಾಸನ ಜಿಲ್ಲೆಯವರಾಗಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರ ಎದುರು ಅದೇ ಹೆಸರಿನ ಮೂವರು ಮಹಿಳೆಯರು ಸ್ಪರ್ಧಿಸಿದ್ದರು. ಮತದಾರರಿಗೆ ಗೊಂದಲ ಮೂಡಿಸುವ ಉದ್ದೇಶದಿಂದ ಸುಮಲತಾ ಹೆಸರಿನ ಬೇರೆ ಮಹಿಳೆಯರನ್ನು ಕಣಕ್ಕಿಳಿಸಲಾಗಿತ್ತು.
ಈ ಚುನಾವಣೆಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರ ಸಹೋದರ ಹೆಚ್.ಡಿ. ರೇವಣ್ಣ ಹೆಸರಿನ ಹಾಸನದ ವ್ಯಕ್ತಿ ನಾಮಪತ್ರ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಕೋಡಿಹಳ್ಳಿ ಗ್ರಾಮದ ಹೆಚ್.ಡಿ. ರೇವಣ್ಣ ಪೂರ್ವಾಂಚಲ್ ಪಂಚಾಯತ್ ಪಾರ್ಟಿ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.
ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ನ ಪ್ರಜ್ವಲ್ ರೇವಣ್ಣ ವಿರುದ್ಧ ಕೂಡ ಹೆಚ್.ಡಿ. ರೇವಣ್ಣ ಎನ್ನುವ ವ್ಯಕ್ತಿ ನಾಮಪತ್ರ ಸಲ್ಲಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಸಿ.ಎನ್. ಮಂಜುನಾಥ್ ಅವರ ವಿರುದ್ಧ ಡಾ.ಸಿ.ಎನ್. ಮಂಜುನಾಥ್ ಹೆಸರಿನ ಮತ್ತೊಬ್ಬ ಅಭ್ಯರ್ಥಿ ಸ್ಪರ್ಧಿಸಿದ್ದಾರೆ. ಮಂಜುನಾಥ ಹೆಸರಿನ ಒಟ್ಟು ಐವರು ಅಭ್ಯರ್ಥಿಗಳು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.