ಬೆಂಗಳೂರು: ಉದ್ಯಮಿ ವಿಜಯ ತಾತಾ ವಿರುದ್ಧ ಜೆಡಿಎಸ್ ನಿಂದ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ 50 ಕೋಟಿಗೆ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ರಿಯಲ್ ಎಸ್ಟೇಟ್ ಉದ್ಯಮಿ ವಿಜಯ್ ತಾತಾ ಎಂಬುವವರು ದೂರು ನೀಡಿದ್ದರು. ಈ ಸಂಬಂಧ ಬೆಂಗಳೂರಿನ ಅಮೃತಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಉದ್ಯಮಿ ವಿಜಯ್ ತಾತಾ ದೂರಿನ ಮೇರೆಗೆ ಕುಮಾರಸ್ವಾಮಿ ಅವರೊಂದಿಗೆ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ರಮೇಶಗೌಡ ವಿರುದ್ಧವು ಎಫ್ಐಆರ್ ದಾಖಲಾಗಿದೆ. ಬಿಎನ್ಎಸ್ ಯು/ಎಸ್(5), 308, (2)351(2) ಅಡಿಯಲ್ಲಿ ಕೇಸ್ ದಾಖಲಾಗಿದೆ.
ಇದರ ಬೆನ್ನಲ್ಲೇ ವಿಜಯ್ ತಾತಾ ವಿರುದ್ಧ ಬೆಂಗಳೂರಿನ ಅಮೃತಹಳ್ಳಿ ಠಾಣೆಗೆ ಜೆಡಿಎಸ್ ಮುಖಂಡ ರಮೇಶ್ ಗೌಡ ದೂರು ನೀಡಿದ್ದಾರೆ. ಜೆಡಿಎಸ್ ಪಕ್ಷದ ವಿಧಾನ ಪರಿಷತ್ ಮಾಜಿ ಸದಸ್ಯರಾಗಿರುವ ರಮೇಶ್ ಗೌಡ ಅವರು ಉದ್ಯಮಿ ವಿಜಯ್ ತಾತಾ 100 ಕೋಟಿ ರೂ. ಕೇಳಿದ್ದರು. ಇಲ್ಲ ಎಂದಿದ್ದಕ್ಕೆ ಬೆದರಿಕೆ ಹಾಕಿದ್ದಾರೆ. ಮನೆಗೆ ಊಟಕ್ಕೆ ಎಂದು ಕರೆಸಿ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ.
ಆಗಸ್ಟ್ 24ರಂದು ಮನೆಗೆ ಊಟಕ್ಕೆ ಕರೆಸಿ ಬೆದರಿಕೆ ಹಾಕಿದ್ದಾರೆ. ನಾನು ಈಗಾಗಲೇ ನಷ್ಟದಲ್ಲಿದ್ದೇನೆ. ನನಗೆ ಹಣ ಬೇಕು. ನೀವು 100 ಕೋಟಿ ಕೊಡಿ. ಇಲ್ಲವಾದರೆ ನಿಮ್ಮನ್ನು ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾಗಿ ರಮೇಶ್ ಗೌಡ ದೂರು ನೀಡಿದ್ದು, ಪೊಲೀಸರು ದೂರು ಸ್ವೀಕರಿಸಿದ್ದಾರೆ.