ಬೆಂಗಳೂರು: ರೈತರ ಖಾತೆಗೆ ಬಂದ ಬರ ಪರಿಹಾರ ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿರುವುದು ಖಂಡನೀಯ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಾವ ಕಡೆಯಿಂದ ನೋಡಿದರೂ ರೈತರ ಸಂಕಷ್ಟಕ್ಕೆ ಕೊನೆಯೇ ಇಲ್ಲ ಎನ್ನುವಂತಾಗಿದೆ. ಹೆಸರಿಗೆ ಅನ್ನದಾತ.., ಆದರೆ, ಅವರ ಕಣ್ಣೀರು ಒರೆಸಿ ಅವರಿಗೆ ಧಾತನಾಗಿ ನಿಲ್ಲಬೇಕಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಕೈಕಟ್ಟಿ ಕೂತಿದೆ ಎಂದು ಟೀಕಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಆಗಿದ್ದ ಬರ ಪರಿಹಾರ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿರುವ ಬ್ಯಾಂಕ್ ಗಳ ವರ್ತನೆ ನಿಜಕ್ಕೂ ಕ್ರೂರಾತಿ ಕ್ರೂರ, ಖಂಡನೀಯ. ಮೊದಲೇ ತೀವ್ರ ಬರ, ಬೆಳೆ ನಾಶದಿಂದ ಕಂಗೆಟ್ಟಿರುವ ರೈತರ ಕಣ್ಣಲ್ಲಿ ರಕ್ತ ಕಣ್ಣೀರು ತರಿಸುವ ಅಮಾನವೀಯ ಕ್ರಮ ಇದು ಎಂದರೆ ತಪ್ಪಲ್ಲ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಕೂಡಲೇ ಸಾಲ ನೀಡಿರುವ ಎಲ್ಲಾ ಬ್ಯಾಂಕ್ ಗಳ ಮುಖ್ಯಸ್ಥರ ಸಭೆ ಕರೆದು, ಈ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಬೇಕು. ಬರ ಪರಿಹಾರ ಮೊತ್ತವನ್ನು ಸಾಲಕ್ಕೆ ಜಮೆ ಮಾಡಬಾರದು ಎಂದು ತಾಕೀತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.