ನವದೆಹಲಿ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಅಂಗವಾಗಿ ಇಂದು ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರು ವಿವಿಧ ಸಮಾಜಮುಖಿ ಕಾರ್ಯ ಕೈಗೊಂಡಿದ್ದಾರೆ.
ದೇವಾಲಯಗಳಲ್ಲಿ ವಿಶೇಷ ಪೂಜೆ, ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಣೆ, ವಿವಿಧೆಡೆ ಅನ್ನಸಂತರ್ಪಣೆ ಸೇರಿ ಅನೇಕ ಸೇವಾ ಕಾರ್ಯ ಕೈಗೊಂಡಿದ್ದಾರೆ. ಇನ್ನು ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಪ್ರಧಾನಿ ಮೋದಿ ಸೇರಿದಂತೆ ಗಣ್ಯರು, ಅಭಿಮಾನಿಗಳು ಶುಭ ಹಾರೈಸಿದ್ದಾರೆ.
ಸಂಸತ್ ಅಧಿವೇಶನ ಹಿನ್ನಲೆಯಲ್ಲಿ ದೆಹಲಿಯಲ್ಲಿರುವ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಚೇತನ ಮಕ್ಕಳೊಂದಿಗೆ ಇಂದು ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ನವದೆಹಲಿಯಲ್ಲಿರುವ ಆರ್.ಕೆ.ಪುರಂ ಸೆಕ್ಟರ್ 5ರಲ್ಲಿರುವ ರಾಷ್ಟ್ರೀಯ ವಿಶೇಷ ಚೇತನ ಮಕ್ಕಳ ಶಾಲೆಗೆ(National association for blind) ತೆರಳಿ ಮಕ್ಕಳ ಜತೆ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದು, ಆ ಮಕ್ಕಳ ಜತೆ ಕಳೆದ ಕೆಲ ಕ್ಷಣಗಳು ನನ್ನ ಜೀವನದ ಸಾರ್ಥಕತೆ ಹೆಚ್ಚಿಸಿದವು. ಆ ಮಕ್ಕಳಲ್ಲಿ ನಾನು ದೈವವನ್ನು ಕಂಡೆ. ಧನ್ಯನಾದೆ ಎಂದು ಹೆಚ್.ಡಿ.ಕೆ. ತಿಳಿಸಿದ್ದಾರೆ.