ಮಂಡ್ಯ: ರಾಜಕೀಯವಾಗಿ ಸಾಕಷ್ಟು ಏಳುಬೀಳು, ಪೈಪೋಟಿಗಳ ನಡುವೆಯೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ನಿಂತು ಗೆದ್ದು, ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಕರ್ನಾಟಕದ ಮಂಡ್ಯದಿಂದ ಗೆದ್ದು ಸಂಸತ್ ಪ್ರವೇಶಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಮಂಡ್ಯ ಜನತೆಯಲ್ಲಿಯೂ ಸಂತಸ ಮನೆ ಮಾಡಿದೆ. ಮಾಜಿ ಸಿಎಂ ಎಸ್.ಎಂ.ಕೃಷ್ಣ, ಅಂಬರೀಶ್ ಬಳಿಕ ಮಂಡ್ಯ ಕ್ಷೇತ್ರದಿಂದ ಗೆದ್ದು, ಕೇಂದ್ರದಲ್ಲಿ ಮಂತ್ರಿ ಸ್ಥಾನ ಗಿಟ್ಟಿಸಿಕೊಳ್ಳುವ ಮೂಲಕ ಕಾಂಗ್ರೆಸ್ ನಾಯಕರಿಗೆ ಕುಮಾರಸ್ವಾಮಿ ಕೌಂಟರ್ ನೀಡಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿಯವರಿಗೆ ಮೋದಿ ಕ್ಯಾಬಿನೆಟ್ ನಲ್ಲಿ ಮಂತ್ರಿಗಿರಿ ಸಿಗುವ ಮೂಲಕ 25 ವರ್ಷಗಳ ಬಳಿಕ ಜೆಡಿಎಸ್ ಗೆ ಕೇಂದ್ರದಲ್ಲಿ ಮಂತ್ರಿಗಿರಿ ಮತ್ತೆ ಒಲಿದಂತಾಗಿದೆ. 1996-97ರಳ್ಲಿ ದೇವೇಗೌಡರು ಪ್ರಧಾನಿಯಾಗಿದ್ದರು, ಈ ವೇಳೆ ಕೆಲ ಕಾಲ ಗೃಹ ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಅಲ್ಲದೇ ಎಸ್. ಆರ್.ಬೊಮ್ಮಾಯಿ ಹಾಗೂ ಸಿಎಂ ಇಬ್ರಾಹಿಂ ಅವರಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ಸಿಕ್ಕಿತ್ತು. ಆನಂತರದಲ್ಲಿ ಜೆಡಿಎಸ್ ನಿಂದ ಸಂಸತ್ ಗೆ ಆಯ್ಕೆಯಾಗಿದ್ದರೂ ಕೂಡ ಮಂತ್ರಿ ಸ್ಥಾನ ಯಾರಿಗೂ ಸಿಕ್ಕಿರಲಿಲ್ಲ. ಇದೀಗ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ಸಿಕ್ಕಿದೆ. ಇದು ರಾಜ್ಯದ ರೈತರ ಅಭಿವೃದ್ಧಿ ಮಾತ್ರವಲ್ಲ ಮಂಡ್ಯ ಭಾಗದ ಅಭಿವೃದ್ಧಿ ನಿಟ್ಟಿನಲ್ಲಿಯೂ ಸಾಕಷ್ಟು ಬದಲಾವಣೆಗೆ ಕಾರಣವಾಗುವ ನಿರೀಕ್ಷೆ ಇದೆ.
ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ ಕೃಷಿ ಖಾತೆಯ ಬಗ್ಗೆ ಒಲವು ಹೊಂದಿದ್ದಾರೆ. ಅಲ್ಲದೇ ಸಕ್ಕರೆ ಖಾತೆಯೂ ಉತ್ತಮ ಖಾತೆ ಎಂದು ಹೇಳಿದ್ದಾರೆ. ಆದರೆ ಕುಮಾರಸ್ವಾಮಿಯವರಿಗೆ ಯಾವ ಖಾತೆ ಸಿಗಲಿದೆ ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಒಂದು ವೇಳೆ ಕೃಷಿ, ಸಕ್ಕರೆ ಅಥವಾ ನೀರಾವರಿ ಖಾತೆ ಕುಮಾರಸ್ವಾಮಿಯವರಿಗೆ ಲಭ್ಯವಾದಲ್ಲಿ ರಾಜ್ಯದಲ್ಲಿನ ಕಾವೇರಿ ನೀರಿನ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುವ ಸಾಧ್ಯತೆಯಿದೆ. ಮೇಕೆದಾಟು ಯೋಜನೆ, ಕಬ್ಬು ಬೆಳೆಗಾರರ ಸಂಕಷ್ಟ, ರೈತರ ಬೆಳೆಗಳಿಗೆ ಬೆಂಬಲ ಬೆಲೆ, ಸಾಲ ಮನ್ನಾ ಸೇರಿದಂತೆ ಹತ್ತು ಹಲವಾರು ಸಮಸ್ಯೆಗಳು ತಾರ್ಕಿಕ ಅಂತ್ಯಕಾಣುವ ನಿರೀಕ್ಷೆಯಿದೆ. ಒಟ್ಟಾರೆ ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ ಬಿಜೆಪಿ ಹೈಕಮಾಂಡ್ ಯಾವ ಪ್ರಮುಖ ಖಾತೆಯನ್ನು ಹಂಚಿಕೆ ಮಾಡಲಿದೆ ಎಂಬುದು ಸದ್ಯದ ಕುತೂಹಲವಾಗಿದೆ.