ಬೆಂಗಳೂರು: ಕಾಂಗ್ರೆಸ್ ಸರ್ಕಾರ ಗುತ್ತಿಗೆದಾರರಿಂದ ಹಣ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ರಿಯಲ್ ಎಸ್ಟೇಟ್ ಬಿಲ್ಡರ್ ಗಳಿಂದ ಕಾಂಗ್ರೆಸ್ ಸರ್ಕಾರ 2 ಸಾವಿರ ಕೋಟಿ ರೂಪಾಯಿ ಸುಲಿಗೆ ಮಾಡಲು ಮುಂದಾಗಿದೆ. ಲೋಕಸಭೆ ಚುನಾವಣೆಗೆ ಹಣ ಸಂಗ್ರಹಿಸುವ ಉದ್ದೇಶದಿಂದ ಬಿಲ್ಡರ್ ಗಳ ಜೊತೆ ಪ್ರಭಾವಿಗಳಿಂದ ಸಭೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.
ಲೋಕಸಭೆ ಚುನಾವಣೆಯನ್ನು ನೆಪವಾಗಿಟ್ಟುಕೊಂಡು ಕೆಲವು ಪ್ರಭಾವಿಗಳು ಬಿಲ್ಡರ್ ಗಳ ಸಭೆ ನಡೆಸಿದ್ದು, ಇಂತಿಷ್ಟು ಕಪ್ಪ ಒಪ್ಪಿಸಲೇಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಪ್ರತಿ ಚದರ ಅಡಿಗೆ 100ರೂಪಾಯಿ ಲೆಕ್ಕದಲ್ಲಿ ಹಣ ವಸೂಲಿ ಮಾಡಲು ಮುಂದಾಗಿದ್ದು, ಈ ಮೂಲಕ 2000 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಎಲ್ಲಾ ಇಲಾಖೆಗಳಲ್ಲಿಯೂ ಲೂಟಿ ಮಾಡಲು ಗುರಿ ನಿಗದಿಪಡಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರ ವಿದ್ಯುತ್ ಖರೀದಿ ನೆಪದಲ್ಲಿ ಹಬ್ಬ ಮಾಡಲು ಮುಂದಾಗಿದೆ. ವಿದ್ಯುತ್ ಖರೀದಿ ಮಾಡಿದಷ್ಟು ಕಿಕ್ ಬ್ಯಾಕ್ ಜಾಸ್ತಿ ಇದ್ದು, ಪ್ರತಿ ತಿಂಗಳು 1,500 ಕೋಟಿ ರೂ. ಖರ್ಚು ಮಾಡಲು ಹೊರಟಿದ್ದಾರೆ. ಅನಧಿಕೃತವಾಗಿ ಲೋಡ್ ಶೆಡ್ಡಿಂಗ್ ಮಾಡುತ್ತಿದ್ದು, ರೈತರಿಗೆ ಅಗತ್ಯವಾದ ವಿದ್ಯುತ್ ಅನ್ನು ಸಮರ್ಪಕವಾಗಿ ನೀಡುತ್ತಿಲ್ಲ. ಈಗ ದೀಪಾವಳಿಗೆ ಮನೆಮನೆಗೆ ಮಣ್ಣಿನ ದೀಪ ನೀಡಲು ಸರ್ಕಾರ ಹೊರಟಿದೆ ಎಂದು ಟೀಕಿಸಿದ್ದಾರೆ.