ಬೆಂಗಳೂರು: ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿಗೆ ಜೆಡಿಎಸ್ ನಿರ್ಧರಿಸಿದೆ. ಬಿಎಮ್ಎಸ್ ಶಿಕ್ಷಣ ಟ್ರಸ್ಟ್ ಪ್ರಕರಣದ ತನಿಖೆಗೆ ಆಗ್ರಹಿಸಿ ಜೆಡಿಎಸ್ ಧರಣಿ ಕೈಗೊಂಡಿದ್ದು, ಕಲಾಪ ಮುಂದೂಡಿಕಿದ ನಂತರವೂ ಜೆಡಿಎಸ್ ಪಕ್ಷದ ಸದಸ್ಯರು ಸದನದಲ್ಲೇ ಧರಣಿ ಮುಂದುವರಿಸಿದ್ದಾರೆ.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ವಿರುದ್ಧ ಜೆಡಿಎಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಹೋರಾತ್ರಿ ಪ್ರತಿಭಟನೆ ಕೈಬಿಡುವಂತೆ ಜೆಡಿಎಸ್ ಸದಸ್ಯರ ಮನವೊಲಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಯತ್ನ ನಡೆಸಿದ್ದಾರೆ. ಅವರೊಂದಿಗೆ ಸಚಿವರಾದ ಜೆ.ಸಿ. ಮಾಧುಸ್ವಾಮಿ, ಆರಗ ಜ್ಞಾನೇಂದ್ರ, ಬಿ. ಶ್ರೀರಾಮುಲು ಅವರು ಜೆಡಿಎಸ್ ಶಾಸಕರ ಮನವೊಲಿಸಲು ಮುಂದಾಗಿದ್ದಾರೆ. ಸ್ಪೀಕರ್ ಕಚೇರಿಯಲ್ಲಿ ಹೆಚ್.ಡಿ. ರೇವಣ್ಣ ಅವರೊಂದಿಗೆ ಸಂಧಾನ ಸಭೆ ನಡೆಸಲಾಗಿದೆ. ಬಿಎಂಎಸ್ ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದಂತೆ ಸಚಿವ ರಾಜೀನಾಮೆಗೆ ಆಗ್ರಹಿಸಿ, ಪ್ರಕರಣದ ತನಿಖೆಗೆ ಆಗ್ರಹಿಸಿ ಅಹೋರಾತ್ರಿ ಧರಣಿಗೆ ಜೆಡಿಎಸ್ ಮುಂದಾಗಿದೆ.
ಈ ಮೊದಲು ಬಿಎಂಎಸ್ ಕಾಲೇಜು ಟ್ರಸ್ಟ್ ಜಮೀನು ಅಕ್ರಮದ ಬಗ್ಗೆ ಹೆಚ್.ಡಿ. ಕುಮಾರಸ್ವಾಮಿ ಪ್ರಸ್ತಾಪಿಸಿದ್ದು, ಅಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಉನ್ನತ ಶಿಕ್ಷಣ ಸಚಿವರ ತಲೆದಂಡವಾಗಲಿ. ದೊಡ್ಡಬಳ್ಳಾಪುರದಲ್ಲಿ ಸರ್ಕಾರದ ಧಮ್, ತಾಕತ್ ತೋರಿಸಿದ್ರಲ್ಲ. ಈಗ ದಾಖಲೆ ನೀಡಿದ್ದೇನೆ. ತೋರಿಸಿ ಎಂದು ಹೇಳಿದ್ದಾರೆ. ಅವರ ಆರೋಪಕ್ಕೆ ಸಚಿವ ಅಶ್ವತ್ಥನಾರಾಯಣ ಉತ್ತರ ನೀಡಿದ್ದಾರೆ.
ವಿಧಾನಸಭೆಯಲ್ಲಿ ಕುಮಾರಸ್ವಾಮಿ ಮತ್ತು ಅಶ್ವತ್ಥನಾರಾಯಣ ಅವರು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಇಬ್ಬರ ನಡುವೆ ಬಿಎಂಎಸ್ ಟ್ರಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿದೆ.