
ಬೆಂಗಳೂರು: ಲೋಕಾಯುಕ್ತ ವಿಶೇಷ ತನಿಖಾ ತಂಡದ ಎಡಿಜಿಪಿ ಎಂ ಚಂದ್ರಶೇಖರ್ ರಾವ್ ಭ್ರಷ್ಟ ಅಧಿಕಾರಿಯಾಗಿದ್ದು, ಆತನ ಮೂಲಕ ರಾಜ್ಯಪಾಲರ ಕಚೇರಿ ಸಿಬ್ಬಂದಿಯ ತನಿಖೆಗೆ ಕಾಂಗ್ರೆಸ್ ಸರ್ಕಾರ ಅನುಮತಿ ಕೇಳಿಸಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಚಂದ್ರಶೇಖರ್ ಭ್ರಷ್ಟ ಅಧಿಕಾರಿಯಾಗಿದ್ದು, ಅವರ ವಿರುದ್ಧ ಕೇಂದ್ರಕ್ಕೆ ದೂರು ನೀಡಲಾಗುವುದು ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಆರೋಪದ ಬೆನ್ನಲ್ಲೇ ಲೋಕಾಯುಕ್ತ ಎಸ್ಐಟಿ ಮುಖ್ಯಸ್ಥರಾಗಿರುವ ಎಡಿಜಿಪಿ ಎಂ. ಚಂದ್ರಶೇಖರ್ ರಾವ್ ತಿರುಗೇಟು ನೀಡಿದ್ದು, “ಹಂದಿಗಳ ಜೊತೆ ಗುದ್ದಾಡಬೇಡಿ, ಏಕೆಂದರೆ ಹಂದಿಗಳಂತೆ ನೀವು ಕೊಳಕಾಗುತ್ತೀರಿ. ಹಂದಿಗಳು ಅದನ್ನು ಸಂಭ್ರಮಿಸುತ್ತವೆ” ಎಂಬ ಜಾರ್ಜ್ ಬರ್ನಾಡ್ ಶಾ ಅವರ ಜನಪ್ರಿಯ ನುಡಿಗಟ್ಟು ಉಲ್ಲೇಖಿಸಿ ಕಿಡಿಕಾರಿದ್ದಾರೆ.
ಎಸ್ಐಟಿ ಸದಸ್ಯರಿಗೆ ಬರೆದ ಪತ್ರದಲ್ಲಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿರುವ ಚಂದ್ರಶೇಖರ್, ತನಿಖಾ ತಂಡಕ್ಕೆ ಧೈರ್ಯ ತುಂಬಿ ಪತ್ರ ಬರೆದಿದ್ದಾರೆ. ಪ್ರಕರಣದ ಆರೋಪಿ ಕುಮಾರಸ್ವಾಮಿ ಸುಳ್ಳು ಆರೋಪಗಳಿಂದ ನಮ್ಮನ್ನು ಕುಗ್ಗಿಸುವ, ಭಯ ಹುಟ್ಟಿಸುವ ಉದ್ದೇಶ ಹೊಂದಿದ್ದಾರೆ. ಆರೋಪಿ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಆರೋಪಿಯೇ. ಇಂತಹ ಬೆದರಿಕೆಗಳಿಗೆ ಎದೆಗುಂದಬಾರದು ಎಂದು ತಿಳಿಸಿದ್ದಾರೆ.
ಅಪರಾಧ ಸಂಖ್ಯೆ 16/14 ರ ಆರೋಪಿ ಕುಮಾರಸ್ವಾಮಿ ಪತ್ರಿಕಾಗೋಷ್ಠಿ ನಡೆಸಿ ಆಧಾರ ರಹಿತ ಆರೋಪಗಳನ್ನು ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ನಮ್ಮನ್ನು ಎದೆಗೊಂದುವಂತೆ ಮಾಡಲು ಬೆದರಿಕೆ ಹಾಕಿದ್ದು, ನಮ್ಮ ಕರ್ತವ್ಯತೆ ಅಡ್ಡಿಪಡಿಸಲು ಪ್ರಯತ್ನಿಸಲಾಗುತ್ತಿದೆ. ಆರೋಪಿ ವಿರುದ್ಧ ಎಸ್ಐಟಿ ಪ್ರಾಸಿಕ್ಯೂಷನ್ ಅನುಮತಿ ಪಡೆದಿದೆ. ಈ ಆರೋಪಿ ಜಾಮೀನು ಪಡೆದವರಾಗಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.