ಬೆಂಗಳೂರು: ನಾಡಗೀತೆ ವಿಚಾರ ಹೈಕೋರ್ಟ್ ಮೆಟ್ಟಿಲೇರಿದ್ದು, ಸಗೀತ ತಜ್ಞರನ್ನು ಕರೆಸಿ ನ್ಯಾಯಾಲಯಕ್ಕೆ ನೆರವಾಗಲು ಸಹಕರಿಸುವಂತೆ ಹೈಕೋರ್ಟ್ ಆದೇಶ ನೀಡಿದೆ.
2 ನಿಮಿಷ 30 ಸೆಕೆಂಡ್ ಗಳಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಆದೇಶ ಪ್ರಶ್ನಿಸಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ದಿ.ಮೈಸೂರು ಅನಂತಸ್ವಾಮಿ ಅವರು ಸಂಯೋಜಿಸಿರುವ ದಾಟಿಯಲ್ಲಿಯೇ ನಾಡಗೀತೆಯನ್ನು 2 ನಿಮಿಷ 30 ಸೆಕೆಂಡ್ ಗಳಲ್ಲಿ ಹಾಡಬೇಕು ಎಂದು ಸರ್ಕಾರ 2022ರ ಸೆಪ್ಟೆಂಬರ್ 25ರಂದು ಆದೇಶ ಹೊರಡಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ.ಕೃಷ್ಣ ಎಸ್.ದೀಕ್ಷಿತ್ ನೇತೃತ್ವದ ಪೀಠ, ಸಂಗೀತ ಶಾಸ್ತ್ರದ ದಿಗ್ಗಜರಲ್ಲಿ ಯಾರನ್ನಾದರೂ ನ್ಯಾಯಾಲಯಕ್ಕೆ ಕರೆಸಿ, ನ್ಯಾಯಾಲಯಕ್ಕೆ ನೆರವಾಗುವಂತೆ ಸೂಚಿಸಿ, ಮುಂದಿನ ವಿಚಾರಣೆಯನ್ನು ಆ.17ಕ್ಕೆ ಮುಂದೂಡಿತು.
ಸಂಗೀತ ಶಾಸ್ತ್ರದ ದಿಗ್ಗಜರಲ್ಲಿ ಯಾರನ್ನು ನ್ಯಾಯಾಲಯಕ್ಕೆ ಕರೆಸಬಹುದು ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. ಇದಕ್ಕೆ ಅರ್ಜಿದಾರೂ ಆಗಿರುವ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ, ಬಿ.ಕೆ.ಸುಮಿತ್ರಾ ಹಾಗೂ ಕಿಕ್ಕೇರಿ ಕೃಷ್ಣಮೂರ್ತಿಯವರನ್ನೇ ಕರೆಸಬಹುದು ಎಂದಿದ್ದಾರೆ. ಸಂಗೀತ ಸಂಬಂಧದ ಗ್ರಂಥವನ್ನು ಓದಿಕೊಂಡು ಆ ಮೂಲಕ ನ್ಯಾಯಾಲಯಕ್ಕೆ ಸಹಾಯ ಮಾಡಬೇಕು ಮುಂದಿನ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ.
ಕೆಲ ರಾಗಗಳಿಗೆ ಕಾಲ ಸಾಪೇಕ್ಷ ಇದೆ. ಕೆಲ ರಾಗವನ್ನು ಬೆಳಿಗ್ಗೆ, ಕೆಲ ರಾಗವನ್ನು ಮಧ್ಯಾಹ್ನ ಹಾಗೂ ಕೆಲ ರಾಗವನ್ನು ಸಂಜೆ ಹಾಡುವಂತಿಲ್ಲ. ಕೆಲ ಚರಣಗಳನ್ನು ರಾತ್ರಿ ರಾಗದಲ್ಲಿ, ಮತ್ತೆ ಕೆಲವು ಚರಣಗಳನ್ನು ಮಧ್ಯಾಹ್ನಿಕ ರಾಗದಲ್ಲಿ ಹೇಳಬೇಕಿದೆ. ಆದರೆ ಒಂದು ಚರಣ ಮಾತ್ರ ಪ್ರಾರ್ಥನಾ ರಾಗದಲ್ಲಿದೆ. ಅದನ್ನು ಯಾಕೆ ಹಾಗೆ ಮಾಡಿದ್ದಾರೆ. ಯಾವುದೇ ಒಂದು ರಾಗದಲ್ಲಿ ಹಾಡನ್ನು ಹಾಡಬಹುದೆ ಎಂಬ ಗೊಂದಲವಿದೆ. ಇದು ಸಂಗೀತ ಶಾಸ್ತ್ರಕ್ಕೆ ಸಂಬಂಧಪಟ್ಟ ವಿಚಾರ. ಹಾಗಾಗಿ ಉತ್ತಮ ಸಂಗೀತ ಗ್ರಂಥಗಳನ್ನು ಓದಿ ತಂದು ತಿಳಿಸಬೇಕು ಎಂದು ಕೋರ್ಟ್ ತಿಳಿಸಿದೆ.