ಅಹಮದಾಬಾದ್: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಕಾಯಂ ಹುದ್ದೆಯಲ್ಲಿರುವ ಸರ್ಕಾರಿ ನೌಕರರಿಗೆ ಸಮನಾಗಿ ಪರಿಗಣಿಸಬೇಕು ಎಂದು ಗುಜರಾತ್ ಹೈ ಕೋರ್ಟ್ ಆದೇಶ ನೀಡಿದೆ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ಈ ಕುರಿತಾಗಿ ಸೂಚನೆ ನೀಡಲಾಗಿದ್ದು, ಈ ಆದೇಶ ದೇಶಾದ್ಯಂತ ಇರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.
ಸರ್ಕಾರಿ ನೌಕರರೊಂದಿಗೆ ಹೋಲಿಸಿದಾಗ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ತಾರತಮ್ಯವಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ನ್ಯಾಯಮೂರ್ತಿ ನಿಖಿಲ್ ಎಸ್. ಕರಿಯೆಲ್ ಅವರು ಆದೇಶದಲ್ಲಿ ಹೇಳಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಹುದ್ದೆಗಳನ್ನು ಸರ್ಕಾರಿ ಸೇವೆಯಲ್ಲಿ ಸೇರ್ಪಡೆ ಮಾಡಲು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ನೀತಿಯೊಂದನ್ನು ರೂಪಿಸಬೇಕು. ಅದರ ಪರಿಣಾಮ ಅವರಿಗೆ ಸಿಗುವ ಪ್ರಯೋಜನಗಳನ್ನು ಒದಗಿಸಬೇಕು ಎಂದು ಸೂಚಿಸಲಾಗಿದೆ.