ಹಾವೇರಿ: ಹಾವೇರಿ ಜಿಲ್ಲೆಯ ಆಲದಕಟ್ಟಿ ಗ್ರಾಮದಲ್ಲಿ ಪಟಾಕಿ ಗೋಡೌನ್ ದುರಂತ ಪ್ರಕರಣದ ಬೆನ್ನಲ್ಲೇ ಜಿಲ್ಲೆಯಾದ್ಯಂತ ಇರುವ 27 ಪಟಾಕಿ ಅಂಗಡಿಗಳನ್ನು ಜಪ್ತಿ ಮಾಡಿರುವ ಘಟನೆ ನಡೆದಿದೆ.
ಪಟಾಕಿ ಗೋಡೌನ್ ನಲ್ಲಿ ಬೆಂಕಿ ದುರಂತದ ಬಳಿಕ ಜಿಲ್ಲಾಡಳಿತ ಅಲರ್ಟ್ ಆಗಿದ್ದು, ಜಿಲ್ಲೆಯಾದ್ಯಂತ ಇರುವ 27 ಪಟಾಕಿ ಅಂಗಡಿಗಳ ಮೇಲೆ ದಾಳಿ ನಡೆಸಿ ಸೀಜ್ ಮಾಡಲಾಗಿದೆ. ಅಂಗಡಿಗಳ ದಾಖಲೆ ಪರಿಶೀಲನೆ ಬಳಿಕ ದಾಖಲೆಗಳು ಸಮರ್ಪಕವಾಗಿದ್ದರೆ ಮಾತ್ರವೇ ಅಂಗಡಿ ಓಪನ್ ಮಾಡಲು ಅವಕಾಶ ನೀಡುವುದಾಗಿ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದ್ದಾರೆ.
ಆಲದಕಟ್ಟಿ ಗ್ರಾಮದಲ್ಲಿ ಸಂಭವಿಸಿದ ಪಟಾಕಿ ಗೋಡೌನ್ ಬೆಂಕಿ ಅವಘಡದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ವೆಲ್ಡಿಂಗ್ ಮಾಡುವಾಗ ನಿರ್ಲಕ್ಷ್ಯದಿಂದ ಕಿಡಿ ಹಾರಿ ಈ ದುರಂತ ಸಂಭವಿಸಿದೆ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ ಎಂದರು.
ಗಣೇಶ್ ಹಬ್ಬ ಸಮೀಪಿಸುತ್ತಿರುವುದರಿಂದ ಒಂದು ಜಾಗ ನಿಗದಿ ಮಾಡಿ ಪಟಾಕಿ ಮಾರಲು ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.