
ಹಾವೇರಿ: ಭಕ್ತರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹಲವು ರೀತಿಯ ಹರಕೆಗಳನ್ನು ಹೊರುತ್ತಾರೆ. ಇಲ್ಲೋರ್ವ ಯುವಕ ಹಿಮ್ಮುಖವಾಗಿ ಟ್ರ್ಯಾಕ್ಟರ್ ಓಡಿಸಿ ಹರಕೆ ತೀರಿಸುವ ವಿಚಿತ್ರ ಘಟನೆ ಹಾವೇರಿಯಲ್ಲಿ ನಡೆದಿದೆ.
ಬರೋಬ್ಬರಿ 174 ಕಿ.ಮೀ ವರೆಗೆ ಟ್ರ್ಯಾಕ್ಟರ್ ಹಿಮ್ಮುಖವಾಗಿ ಚಲಾಯಿಸಿಕೊಂಡು ಹೋಗಿ ಯುವಕ ಶಿವನಗೌಡ ಹರಕೆ ತೀರಿಸಿದ್ದಾನೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕುನ್ನೂರು ಗ್ರಾಮದ ನಿವಾಸಿ 25 ವರ್ಷದ ಶಿವನಗೌಡ ಪಾಟೀಲ್ ಈ ಸಾಹಸ ಮಾಡಿದ್ದಾನೆ.
ಟ್ರ್ಯಾಕ್ಟರ್ ಟ್ರ್ಯಾಲಿ ಸಮೇತ ರಿವರ್ಸ್ ಡ್ರೈವ್ ಮಾಡಿಕೊಂಡು ಉಳವಿ ಚನ್ನಬಸವೇಶ್ವರ ದೇವಾಲಯಕ್ಕೆ ತಲುಪಿ ದೇವರ ದರ್ಶನ ಪಡೆದಿದ್ದಾನೆ ಶಿವನಗೌಡ. ಸುಮಾರು 16 ತಾಸಿನಲ್ಲಿ ಹಗಲು-ರಾತ್ರಿ ಟ್ರ್ಯಾಕ್ಟರ್ ಹಿಮ್ಮುಖವಾಗಿ ಚಲಾಯಿಸಿ 174 ಕಿ.ಮೀ ದೂರವನ್ನು ಕ್ರಮಿಸಿದ್ದಾನೆ. 5 ವರ್ಷಗಳ ಹಿಂದೆ ಯುವಕ ಹರಕೆ ಹೊತ್ತಿದ್ದನಂತೆ ಅದನ್ನು ಈ ವರ್ಷ ತೀರಿಸಿದ್ದಾಗಿ ತಿಳಿದುಬಂದಿದೆ.