ಹಾವೇರಿ: ಹಾವೇರಿಯಲ್ಲಿ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನವೆಂಬರ್ 11 ರಿಂದ ಮೂರು ದಿನಗಳ ಕಾಲ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ. ಆದರೆ, ನಿಗದಿತ ದಿನದಂದು ಸಮ್ಮೇಳನ ನಡೆಯುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಸಾಹಿತ್ಯ ಸಮ್ಮೇಳನಕ್ಕೆ ಹಣ ಬಿಡುಗಡೆಯಾಗಿಲ್ಲ. ತಯಾರಿ ನಡೆದಿಲ್ಲ. ಒಂದು ತಿಂಗಳು ಏಳು ದಿನಗಳು ಬಾಕಿ ಉಳಿದಿದ್ದು, ಘೋಷಿತ ದಿನದಂದು ಸಾಹಿತ್ಯ ಸಮ್ಮೇಳನ ನಡೆಸುವುದು ಸಾಧ್ಯವಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಶಿ ಹೇಳಿದ್ದಾರೆ.
ನವೆಂಬರ್ 11 ರಿಂದ ಮೂರು ದಿನಗಳ ಕಾಲ ನಿಗದಿಯಾದ ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ಇದುವರೆಗೆ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಪೂರ್ವಭಾವಿ ಸಭೆ ನಡೆಸಿಲ್ಲ. ಮುಖ್ಯಮಂತ್ರಿಗಳು ಮತ್ತು ನನಗೂ ಸ್ವಂತ ಜಿಲ್ಲೆಯಾಗಿರುವ ಹಾವೇರಿ ಸಮ್ಮೇಳನಕ್ಕೆ ಇಂತಹ ಸ್ಥಿತಿ ಬಂದಿರುವುದು ದೌರ್ಭಾಗ್ಯ ಎಂದು ಮಹೇಶ್ ಜೋಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವೇಳೆಗೆ ಸಮ್ಮೇಳನದ ಲಾಂಛನ ಬಿಡುಗಡೆಯಾಗಬೇಕಿತ್ತು. ಸಮ್ಮೇಳನದ ಸ್ವಾಗತ ಸಮಿತಿ, ಹಣಕಾಸು ಸಮಿತಿ, ವೇದಿಕೆ ನಿರ್ಮಾಣ, ವಸತಿ ಸಮಿತಿ, ಪ್ರಚಾರ ಸಮಿತಿ ಸೇರಿದಂತೆ 20 ಸಮಿತಿಗಳು ಕಾರ್ಯಾರಂಭ ಮಾಡಬೇಕಿತ್ತು, ಆದರೆ, ಪೂರ್ವಸಿದ್ಧತೆ ನಡೆದಿಲ್ಲ. ಹಣ ಕೂಡ ಬಿಡುಗಡೆಯಾಗಿಲ್ಲ. ಹೀಗಾಗಿ ಘೋಷಿತ ದಿನದಂದು ಸಮ್ಮೇಳನ ನಡೆಸುವುದು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.