
ಹಾವೇರಿ: ಲಂಚ ಪಡೆಯುತ್ತಿದ್ದ ಹಾವೇರಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಅಂದಾನಪ್ಪ ವಡಗೇರಿ ಮತ್ತು ಪ್ರಥಮ ದರ್ಜೆ ಸಹಾಯಕ ದತ್ತಾತ್ರೇಯ ಕುಂಟೆ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ನಿವೃತ್ತ ಶಿಕ್ಷಕರೊಬ್ಬರಿಂದ ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ರಟ್ಟಿಹಳ್ಳಿಯ ಸರ್ಕಾರಿ ಉರ್ದು ಶಾಲೆಯ ನಿವೃತ್ತ ಶಿಕ್ಷಕ ಮೊಹಮ್ಮದ್ ಗೌಸ್ ಅವರು ನಿವೃತ್ತಿ ವೇತನಕ್ಕಾಗಿ ಅಗತ್ಯ ದಾಖಲೆ ನೀಡಿ ಅವುಗಳನ್ನು ಸಂಬಂಧಿಸಿದ ಈ ಇಲಾಖೆಗೆ ಕಳುಹಿಸಲು ಮನವಿ ಮಾಡಿದ್ದರು. ಇದಕ್ಕಾಗಿ ಡಿಡಿಪಿಐ ಅಂದಾನಪ್ಪ 7 ಸಾವಿರ ರೂಪಾಯಿ ಲಂಚ ಕೇಳಿದ್ದರು. ಲಂಚದ ಹಣ ಪಡೆಯುವಾಗಲೇ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಡಿಡಿಪಿಐ ಮತ್ತು ಎಫ್.ಡಿ.ಎ. ವಶಕ್ಕೆ ಪಡೆದುಕೊಂಡಿದ್ದಾರೆ. ಹಾವೇರಿ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.