ಬೆಂಗಳೂರು: ಶಾಲಾ ಮಕ್ಕಳ ಆರೋಗ್ಯ, ಶಿಕ್ಷಣ, ಜೀವನ ಗುಣಮಟ್ಟ ಸುಧಾರಣೆಯ ಉದ್ಧೇಶದಿಂದ ಹಾವೇರಿ ಜಿಲ್ಲಾಡಳಿತ ವಿಶೇಷ ಕಾರ್ಯಕ್ರಮ ರೂಪಿಸಿದ್ದು, ವಾತ್ಸಲ್ಯ ಯೋಜನೆ ಎಂದು ನಾಮಕರಣ ಮಾಡಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಹಾವೇರಿ ಜಿಲ್ಲೆಯಲ್ಲಿ ಈ ಕಾರ್ಯಕ್ರಮದ ಜಾರಿಯಲ್ಲಿದೆ. ಕೊರೋನಾ ಮೂರನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು ಮಕ್ಕಳ ಆರೋಗ್ಯ ಪರೀಕ್ಷೆ ನಡೆಸಿ ಪರಿಹಾರ ನೀಡಲಾಗುತ್ತದೆ.
ಪೌಷ್ಟಿಕ ಆಹಾರ, ಸ್ವಚ್ಛತೆ, ಕುಡಿಯುವ ನೀರು, ಆರೋಗ್ಯ, ಕೌಟುಂಬಿಕ ಆದಾಯ, ವೈದ್ಯಕೀಯ ನೆರವು, ಆರೋಗ್ಯಸೇವೆ ಲಭ್ಯತೆ ಮೊದಲಾದವುಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಲಾಗಿದೆ. ಶಾಲಾ ಮಕ್ಕಳಿಗೆ ಬಿಸಿಯೂಟದ ಆಹಾರಧಾನ್ಯಗಳನ್ನು ವಿತರಿಸಲಾಗುವುದು. ಅಂಗನವಾಡಿ ಮಕ್ಕಳಿಗೆ ಫುಡ್ ಕಿಟ್ ನೀಡಲಾಗುವುದು ಎಂದು ಹೇಳಲಾಗಿದೆ.