ಒಂದೇ ದಿನ ರಾಜ್ಯದ ಇಬ್ಬರು ಬಿಜೆಪಿ ಶಾಸಕರಿಗೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನ್ಯಾಯಾಲಯ ಸೋಮವಾರದಂದು ಜೈಲು ಶಿಕ್ಷೆ ವಿಧಿಸಿರುವ ಘಟನೆ ನಡೆದಿದೆ. ಹಾವೇರಿಯ ಬಿಜೆಪಿ ಶಾಸಕ ನೆಹರು ಓಲೆಕಾರ ಹಾಗೂ ಅವರ ಇಬ್ಬರು ಮಕ್ಕಳಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದ್ದರೆ, ಮತ್ತೊಂದು ಪ್ರಕರಣದಲ್ಲಿ ಮೂಡಿಗೆರೆ ಕ್ಷೇತ್ರದ ಶಾಸಕ ಕುಮಾರಸ್ವಾಮಿಯವರು ಅಪರಾಧಿ ಎಂದು ಆದೇಶ ನೀಡಲಾಗಿದೆ.
ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತ ಪ್ರಕರಣದಲ್ಲಿ ನೆಹರು ಓಲೆಕಾರ ಹಾಗೂ ಅವರ ಮಕ್ಕಳಿಗೆ ಶಿಕ್ಷೆ ವಿಧಿಸಲಾಗಿದ್ದರೆ, ಚೆಕ್ ಬೌನ್ಸ್ ಪ್ರಕರಣದಲ್ಲಿ ಎಂ.ಪಿ. ಕುಮಾರಸ್ವಾಮಿಯವರನ್ನು ಅಪರಾಧಿ ಎಂದು ಆದೇಶಿಸಲಾಗಿದ್ದು, ನಿಗದಿತ ಅವಧಿಯೊಳಗೆ ದೂರುದಾರರಿಗೆ ಹಣ ನೀಡದಿದ್ದರೆ ಪ್ರತಿ ಕೇಸಿಗೆ ಆರು ತಿಂಗಳಂತೆ ಒಟ್ಟು ಎಂಟು ಪ್ರತ್ಯೇಕ ಚೆಕ್ ಬೌನ್ಸ್ ಪ್ರಕರಣಗಳಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.
ನೆಹರು ಓಲೆಕಾರ, ತಮ್ಮ ಮಕ್ಕಳಾದ ಮಂಜುನಾಥ್ ಹಾಗೂ ದೇವರಾಜ್ ಓಲೇಕರ ಅವರಿಗೆ 50 ಲಕ್ಷ ರೂಪಾಯಿ ಕಾಮಗಾರಿ ಗುತ್ತಿಗೆ ನೀಡಿ ಸೃಜನ ಪಕ್ಷಪಾತ ಹಾಗೂ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆದು ಈಗ ತೀರ್ಪು ಹೊರಬಿದ್ದಿದೆ. ಮತ್ತೊಂದು ಪ್ರಕರಣದಲ್ಲಿ ಎಂಪಿ ಕುಮಾರಸ್ವಾಮಿ ಹೂವಪ್ಪ ಎಂಬವರಿಂದ ಹಣ ಪಡೆದಿದ್ದು, ಈ ಪೈಕಿ 1.38 ಕೋಟಿ ರೂಪಾಯಿಗಳಿಗೆ ಎಂಟು ಪ್ರತ್ಯೇಕ ಚೆಕ್ ನೀಡಿದ್ದರು. ಅವುಗಳು ಬೌನ್ಸ್ ಆದ ಹಿನ್ನೆಲೆಯಲ್ಲಿ ಹೂವಪ್ಪ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈಗ ತೀರ್ಪು ಹೊರಬಿದ್ದಿದೆ.